ಇಂಗ್ಲೆಂಡ್ನ ದಕ್ಷಿಣ ಭಾಗದಲ್ಲಿ ವಿಲ್ಟ್ಶೈರ್ ಎಂಬ ಒಂದು ಐಷಾರಾಮಿ ಪ್ರದೇಶವಿದೆ. ಅದರಲ್ಲಿ ಒಂದು ಚೆಂದನೆಯ ಹಳ್ಳಿಯಿದೆ. ಆ ಹಳ್ಳಿ ಹೆಸರು ಕ್ಯಾಸಲ್ ಕೋಮ್ (Castle Combe). ಆ ಹಳ್ಳಿಯ ಪರಿಸರ ಅದೆಷ್ಟು ಸುಂದರವಾಗಿದೆ ಅಂತೀರಿ.., ಸುತ್ತಲೆಲ್ಲೂ ನೋಡಿದರೂ ಪುಟ್ಟಪುಟ್ಟ ಬೆಟ್ಟಗಳು. ಹಸಿರು ಮೈತುಂಬಿ ನಿಂತಿರುವ ನೋಟ.. ನುಣುಪಾದ ರಸ್ತೆಗಳು..ನವಿರಾಗಿ ಹರಿಯುವ ತೊರೆಗಳು. ಎರಡು ಕಣ್ಣು ಸಾಲದು ಅಲ್ಲಿನ ಪ್ರಕೃತಿಯ ಅಂದವನ್ನು ಕಣ್ತುಂಬಿಕೊಳ್ಳಲು. ಇಡೀ ಯುಕೆಯಲ್ಲಿಯೇ ಅದ್ಭುತ ತಾಣ ಎನ್ನಿಸಿಕೊಂಡಿದೆ ಈ ಹಳ್ಳಿ. ಕ್ಯಾಸಲ್ ಕೋಮ್ ಹಳ್ಳಿ (Castle Combe Village)ಯಲ್ಲಿ ವಾಸಿಸಲೂ ಪುಣ್ಯಮಾಡಿರಬೇಕು ಎನ್ನುತ್ತಿದ್ದಾರೆ ಆ ಜಾಗವನ್ನು ನೋಡಿದವರು. ಆದರೆ ವೈರುಧ್ಯವೆಂದರೆ, ಕ್ಯಾಸಲ್ ಕೋಮ್ ಹಳ್ಳಿಯ ಜನ ತಮ್ಮ ಮನೆ ತೊರೆಯುತ್ತಿದ್ದಾರೆ. ನಮಗೆ ಈ ಹಳ್ಳಿ ಸಹವಾಸವೇ ಬೇಡ ಎನ್ನುತ್ತ ಹೊರಡಲು ಅಣಿಯಾಗುತ್ತಿದ್ದಾರೆ. ಕೆಲವರು ಹೊರಟೇ ಹೋಗಿದ್ದಾರೆ. ಇನ್ನೆಂದೂ ಇಲ್ಲಿಗೆ ಮರಳುವುದಿಲ್ಲ ಎನ್ನುತ್ತಿದ್ದಾರೆ.
ಅರೆ, ಇದ್ಯಾಕೆ ಹೀಗೆ ಅಂತೀರಾ? ನೋಡಿದವರೆಲ್ಲ ಈ ಹಳ್ಳಿಯಲ್ಲಿ ನಮಗೊಂದು ಮನೆ ಇರಬಾರದಿತ್ತೇ ಎಂದುಕೊಳ್ಳುತ್ತಿರುವಾಗ, ಅಲ್ಲಿಯೇ ಹುಟ್ಟಿ, ಮನೆ ಮಾಡಿಕೊಂಡವರೆಲ್ಲ ಹೊರಡುತ್ತಿರುವುದು ಯಾಕೆಂದು ನಿಮಗೆ ಅಚ್ಚರಿಯಾಗುತ್ತಿರಬಹುದು. ಅದಕ್ಕೆ ಕಾರಣ ಅವರ ಖಾಸಗಿ ಬದುಕಿಗೆ ಧಕ್ಕೆಯಾಗುತ್ತಿರುವುದಂತೆ..!. ಕ್ಯಾಸಲ್ ಕೋಮ್ ಹಳ್ಳಿ ವರ್ಷಪೂರ್ತಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆಯಂತೆ. ಇವರಿಂದಾಗಿ ಹಳ್ಳಿ ನಿವಾಸಿಗಳಿಗೆ ತಮ್ಮೂರು ಪರ ಊರಿನಂತೆ ಭಾಸವಾಗುತ್ತಿದೆಯಂತೆ. ಸೆಕ್ಯೂರಿಟಿ ದೃಷ್ಟಿಯಿಂದಲೂ ಇವರಿಗೆ ತೊಂದರೆಯಾಗುತ್ತಿದೆಯಂತೆ.
ಕ್ಯಾಸಲ್ ಕೋಮ್ನ ಹಳ್ಳಿಯ ಚಿತ್ರಣ
ಪ್ರವಾಸಿಗರು ಬಂದವರು ಹಳ್ಳಿಯಲ್ಲಿ ಎಲ್ಲೆಂದರಲ್ಲಿ ತಿರುಗಾಡುವುದು. ಇಲ್ಲಿನ ಜನರ ಖಾಸಗಿ ಜಾಗದಲ್ಲೆಲ್ಲ ಬೇಕಾಬಿಟ್ಟಿ ಬಂದು ಬೀಡು ಬಿಡುವುದು ಮಾಡುತ್ತಾರಂತೆ. ಈ ಹಳ್ಳಿಯಲ್ಲಿರುವ ಅತ್ಯಂತ ಪುರಾತನ ರಸ್ತೆಗಳು ಸದಾ ಗೌಜು-ಗದ್ದಲದಿಂದ ಕೂಡಿರುತ್ತವೆ. ಎಲ್ಲೇ ನೋಡಿದರೂ ಪ್ರವಾಸಿಗರ ಬಸ್ಗಳು, ವಾಹನಗಳು ನಿಂತಿರುತ್ತವೆ. ಫೋಟೋ ಶೂಟ್ಗಾಗಿ ಡ್ರೋನ್ಗಳು ಹಾರಾಡುತ್ತಿವೆ. ಇದರಿಂದಾಗಿ ಹಳ್ಳಿಯ ನಿವಾಸಿಗಳಿಗೆ ಸಿಕ್ಕಾಪಟೆ ಡಿಸ್ಟರ್ಬ್ ಆಗುತ್ತಿದೆ. ನಮ್ಮ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮಗೆ ಖಾಸಗಿ ಬದುಕೇ ಇಲ್ಲದಂತಾಗಿದೆ ಎಂದು ಹಳ್ಳಿಗರು ಅಲವತ್ತುಕೊಳ್ಳುತ್ತಿದ್ದಾರೆ. ಹಳ್ಳಿ ಸಂಪೂರ್ಣವಾಗಿ ಪ್ರವಾಸಿ ತಾಣವೇ ಆಗಿ ಹೋಗಿದೆ. ಜನ ವಾಸಕ್ಕೆ ಅನುಕೂಲವಾಗಿಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ: Tiger Sighting: ಹುಲಿಯ ಲಂಗೂರ್ ಬೇಟೆ, ಪ್ರವಾಸಿಗರಿಗೆ ಕಂಡ ಅಪರೂಪದ ದೃಶ್ಯ
ಇತ್ತೀಚಿನ ದಿನಗಳಲ್ಲಿ ಕ್ಯಾಸಲ್ ಕೋಮ್ ಹಳ್ಳಿಯಲ್ಲಿ ಜನಸಂಖ್ಯೆ ಕಡಿಮೆಯಾಗಿದೆ ಎಂದು ದಿ ಮಿರರ್ ಮಾಧ್ಯಮ ವರದಿ ಮಾಡಿದೆ. ಅಲ್ಲಿನ ಶಾಶ್ವತ ನಿವಾಸಿಗಳು ಊರುಬಿಡುತ್ತಿದ್ದಾರೆ. ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಹಳ್ಳಿಗರು ಈ ಪ್ರದೇಶ ಬಿಟ್ಟು ಹೋಗುತ್ತಿದ್ದಂತೆ ಅವರ ಮನೆಗಳನ್ನೆಲ್ಲ ಬಾಡಿಗೆ ರೂಮ್ಗಳಾಗಿ ಕನ್ವರ್ಟ್ ಮಾಡಿ, ಪ್ರವಾಸಿಗರಿಗೆ ಅನುವು ಮಾಡಿಕೊಡಲಾಗುತ್ತಿದೆ. ಇಲ್ಲಿದ್ದ ರೈತರು, ವೈದ್ಯರು, ವಿಜ್ಞಾನಿಗಳೆಲ್ಲ ಲಂಡನ್ಗೆ ಹೋಗಿ, ಬೇರೆಬೇರೆ ಕಡೆಗಳಲ್ಲಿ ವಾಸಿಸುತ್ತಿದ್ದಾರೆ. ಹಾಗಂತ ಇಲ್ಲಿಂದ ಹೋಗುವವರೂ ಬೇಸರದಿಂದಲೇ ಊರು ಬಿಡುತ್ತಿದ್ದಾರೆ. ಅಂದರೆ, ಅವರಿಗೆ ಪ್ರವಾಸಿಗರಿಂದ ಇನ್ನೆಷ್ಟು ಕಿರಿಕಿರಿ ಆಗಿರಬೇಕು ನೋಡಿ..
ಸೊಬಗಿನ ಹಳ್ಳಿ ಕ್ಯಾಸಲ್ ಕೋಮ್