Site icon Vistara News

Pervez Musharraf Death: ಪರ್ವೇಜ್ ಮುಷರಫ್ ಹುಟ್ಟೂರು ದಿಲ್ಲಿ; ವಿಸ್ಕಿ, ಸಿಗಾರ್ ಪ್ರಿಯ

Pervez Musharraf born in Delhi, India

ಇಸ್ಲಾಮಾಬಾದ್: ದುಬೈನಲ್ಲಿ ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf Death) ಅವರು ಸುಮಾರು ಒಂದು ದಶಕದ ಕಾಲ ಪಾಕಿಸ್ತಾನ(Pakistan)ವನ್ನು ಮುನ್ನಡೆಸಿದ್ದರು. ಸಾಂಪ್ರಾದಾಯಿಕ ಮುಸ್ಲಿಮ್ ದೇಶವಾಗಿರುವ ಪಾಕಿಸ್ತಾನದಲ್ಲಿ ಮುಷರಫ್ ಆಡಳಿತದಿಂದಾಗಿ ಸಾಕಷ್ಟು ಪ್ರಗತಿಪರ ಮೌಲ್ಯಗಳಿಗೆ ಬೆಲೆ ಬಂದಿತ್ತು. ಅಲ್ಲದೇ, ಪಾಕಿಸ್ತಾನವು ಆರ್ಥಿಕವಾಗಿ ಸಾಕಷ್ಟು ಅಭಿವೃದ್ದಿಯಾಗಿತ್ತು. ಅಂದ ಹಾಗೆ, ಫೋರ್ ಸ್ಟಾರ್ ಜನರಲ್ ಪರ್ವೇಜ್ ಮುಷರಫ್ ಅವರು ಜನಿಸಿದ್ದು ಭಾರತದ ರಾಜಧಾನಿ ದಿಲ್ಲಿಯಲ್ಲಿ!

ದಿಲ್ಲಿಯಲ್ಲಿ ಜನನ

ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜನರಲ್ ಪರ್ವೇಜ್ ಮುಷರಫ್ ಅವರು 1943ರಲ್ಲಿ ದಿಲ್ಲಿಯಲ್ಲಿ ಜನಿಸಿದರು. ದೇಶ ವಿಭಜನೆಯ ಹಿನ್ನೆಲೆಯಲ್ಲಿ, ಅವರಿಗೆ 4 ವರ್ಷದವರಾಗಿದ್ದಾಗ ಅವರ ಪೋಷಕರು ಪಾಕಿಸ್ತಾನಕ್ಕೆ ವಲಸೆ ಹೋದರು. ಪರ್ವೇಜ್ ಅವರ ತಂದೆ ವಿದೇಶಾಂಗ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ತಾಯಿ ಶಿಕ್ಷಕಿಯಾಗಿದ್ದರು. ಪರ್ವೇಜ್ ಮುಷರಫ್ ಅವರ ಕುಟುಂಬ ತೀರಾ ಕಟ್ಟರ್ ಮುಸ್ಲಿಮ್ ಕುಟುಂಬವಾಗಿರಲಿಲ್ಲ. ತಮ್ಮ 18ನೇ ವಯಸ್ಸಿನಲ್ಲಿ ಪರ್ವೇಜ್ ಮುಷರಫ್ ಪಾಕಿಸ್ತಾನ ಸೇನೆಯನ್ನು ಸೇರಿದರು.

ಕಾರ್ಗಿಲ್ ಯುದ್ಧದ ಸಂಚುಕೋರ

1999ರಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವೆ ನಡೆದ ಕಾರ್ಗಿಲ್ ಯುದ್ಧದ ಹಿಂದಿನ ರೂವಾರಿ ಜನರಲ್ ಪರ್ವೇಜ್ ಮುಷರಫ್ ಆಗಿದ್ದರು. ಈ ಕಾರಣಕ್ಕಾಗಿಯೇ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರು, ಮುಷರಫ್ ಅವರನ್ನು ಸೇನಾ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಲು ಮುಂದಾದರು. ಇದನ್ನು ಅರಿತ ಮುಷರಫ್ ಅವರು, ಕ್ಷಿಪ್ರ ಸೇನಾ ಕ್ರಾಂತಿಯನ್ನು ನಡೆಸಿ, ಷರೀಫ್ ಅವರನ್ನು ಪದಚ್ಯುತಗೊಳಿಸಿ, ಪಾಕಿಸ್ತಾನದ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಸಿಗಾರ್, ವಿಸ್ಕಿ ಪ್ರೀತಿ

ಪರ್ವೇಜ್ ಮುಷರಫ್ ಅವರಿಗೆ ಸಿಗಾರ್ ಮತ್ತು ವಿಸ್ಕಿ ಬಹುಪ್ರಿಯವಾಗಿತ್ತು. ಮುಸ್ಲಿಮರು ಕೂಡ ಮಿತವಾಗಿ ಸಿಗಾರ್ ಮತ್ತು ವಿಸ್ಕಿ ಸೇವನೆಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದ್ದರು. ಅಮೆರಿಕದ ಟ್ವಿನ್ ಟವರ್ ಮೇಲೆ 2001 ಸೆಪ್ಟೆಂಬರ್ 11ರಂದ ಉಗ್ರ ದಾಳಿ ನಡೆದ ಬಳಿಕ, ಮುಷರಫ್ ಅವರ ಈ ಕರೆಯು ಅಮೆರಿಕದಲ್ಲಿ ಭಾರೀ ಜನಪ್ರಿಯಗೊಂಡಿತ್ತು.

ಇದನ್ನೂ ಓದಿ: Pervez Musharraf Died: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ವಾಜಪೇಯಿ ಜತೆ ಮಾತುತೆ

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವಿವಿಧ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಉಭಯ ರಾಷ್ಟ್ರಗಳು ಆಗ್ರಾ ಶೃಂಗ ಸಭೆಗೆ ಒಪ್ಪಿದ್ದವು. ಅದರಂತೆ, 2001 ಜುಲೈನಲ್ಲಿ ಆಗ್ರಾ ಶೃಂಗ ಸಭೆಯನ್ನು ಆಯೋಜಿಸಲಾಗಿತ್ತು. ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಭಾರತಕ್ಕೆ ಬಂದು ಶೃಂಗದಲ್ಲಿ ಪಾಲ್ಗೊಂಡರು. ಇದೇ ವೇಳೆ, ತಾವು ಜನಿಸಿದ ಮತ್ತು ತಮ್ಮ ಪೂರ್ವಜರು ವಾಸವಿದ್ದ ದಿಲ್ಲಿಯ ಮನೆಗೂ ಭೇಟಿ ನೀಡಿದ್ದರು. ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸ್ನೇಹದ ದ್ಯೂತಕವಾಗಿ ಪರಸ್ಪರ ಕೈ ಕುಲುಕಿ ಪೋಸು ನೀಡಿದರು. ಆದರೆ, ಪಾಕಿಸ್ತಾನದ ಹಟಮಾರಿತನದಿಂದಾಗಿ ಆಗ್ರಾ ಸೃಂಗ ಸಭೆ ವಿಫಲವಾಯಿತು.

Exit mobile version