ಇಸ್ಲಾಮಾಬಾದ್: ಪೇಷಾವರದ ಮಸೀದಿಯಲ್ಲಿ ಮಾರಕ ಬಾಂಬ್ ದಾಳಿ ನಡೆದ ದಿನಗಳ ನಂತರ, ಪಾಕಿಸ್ತಾನ ಸರ್ಕಾರದ ಒಳಗೇ ಕೋಲಾಹಲ ಆರಂಭವಾಗಿದೆ. ನಾವು ಜಗತ್ತಿನ ವಿರುದ್ಧ ಹೋರಾಡಲು ಮುಜಾಹಿದೀನ್‌ಗಳನ್ನು ಸೃಷ್ಟಿಸುವ ಅಗತ್ಯವಿಲ್ಲ. ನಾವು ಅವರನ್ನು ಸೃಷ್ಟಿಸಿದೆವು ಮತ್ತು ಅವರು ಭಯೋತ್ಪಾದಕರಾದರು- ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರಾಣಾ ಸನಾವುಲ್ಲಾ ಮೇಲ್ಮನೆಯಲ್ಲಿ ಮಂಗಳವಾರ ಹೇಳಿದ್ದಾರೆ.
ರಕ್ಷಣಾ ಸಚಿವ ಖ್ವಾಜಾ ಆಸಿಫ್ ಕೂಡ ಮಾತನಾಡಿ, ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯ ಕುರಿತು ರಾಷ್ಟ್ರೀಯ ಭದ್ರತಾ ಸಮಿತಿ ತೀರ್ಮಾನಿಸಲಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಆಂತರಿಕ ಸಚಿವರು ಮಾತನಾಡಿ, ಈ ಹಿಂದಿನ ಇಮ್ರಾನ್ ಖಾನ್ ಸರ್ಕಾರವು, ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆಯ ಅನೇಕ ಭಯೋತ್ಪಾದಕರನ್ನು ಬಿಡುಡಗೆ ಮಾಡಿತ್ತು ಎಂದಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನಲ್ಲಿ ನಿನ್ನೆ ಈ ಕುರಿತು ಭಾರಿ ವಾಗ್ವಿವಾದ ನಡೆಯಿತು. ಉಗ್ರ ಸಂಘಟನೆಗಳ ಮೇಲೆ ಕಠಿನ ಕಾರ್ಯಾಚರಣೆಗೆ ಹೆಚ್ಚಿನ ಸದಸ್ಯರು ಒತ್ತಾಯಿಸಿದರು.
ಜನವರಿ 30ರಂದು ಪೇಷಾವರದ ಮಸೀದಿಯಲ್ಲಿ ಭೀಕರ ಆತ್ಮಹತ್ಯೆ ಬಾಂಬ್ ದಾಳಿ ನಡೆದಿತ್ತು. ನೂರಕ್ಕೂ ಹೆಚ್ಚು ಮಂದಿ ಸತ್ತಿದ್ದರು, ಈ ದುಷ್ಕರ್ಮದ ಹೊಣೆಯನ್ನು ಟಿಟಿಪಿ ಹೊತ್ತಿದೆ. ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಹತ್ತು ಹಲವಾರು ಉಗ್ರ ಸಂಘಟನೆಗಳ ಒಕ್ಕೂಟ ಈ ಸಂಘಟನೆಯಾಗಿದೆ.
ಇದನ್ನೂ ಓದಿ: Peshawar Blast: ಪಾಕ್ ಮಸೀದಿ ಸ್ಫೋಟದಲ್ಲಿ ಮೃತರ ಸಂಖ್ಯೆ 83ಕ್ಕೆ ಏರಿಕೆ, ನಾವು ದಾಳಿ ಮಾಡಿಲ್ಲ ಎಂದ ತಾಲಿಬಾನ್
ಕಲೆದ ನವೆಂಬರ್ ತಿಂಗಳಿನಿಂದ ಈಚೆಗೆ ದೇಶಾದ್ಯಂತ ಉಗ್ರ ದಾಳಿ ಘಟನೆಗಳು ಹೆಚ್ಚುತ್ತಿವೆ. ಅದಕ್ಕೂ ಮುನ್ನ ಸರ್ಕಾರ ಹಾಗೂ ಟಿಟಿಪಿ ಸಂಘಟನೆ ನಡುವೆ ಏರ್ಪಡಿಸಲಾಗಿದ್ದ ರಾಜಿ ಸಂಧಾನ ಮುರಿದುಬಿದ್ದಿತ್ತು. ಟಿಟಿಪಿಯು 2007ರಲ್ಲಿ ಸ್ಥಾಪನೆಯಾಗಿದ್ದು, ಉಗ್ರವಾದದ ವಿರುದ್ಧ ಅಮೆರಿಕದ ಹೋರಾಟದ ಜತೆ ಪಾಕ್ ಕೈಜೋಡಿಸುವುದನ್ನು ವಿರೋಧಿಸುತ್ತದೆ. ಅಫಘಾನಿಸ್ತಾನದ ತಾಲಿಬಾನ್ ಜತೆಗೂ ಕೈಜೋಡಿಸಿದೆ.
ಏತನ್ಮಧ್ಯೆ, ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, ಹದಗೆಡುತ್ತಿರುವ ದೇಶದ ಭದ್ರತಾ ಪರಿಸ್ಥಿತಿಗೆ ಅಫ್ಘಾನ್ ನಿರಾಶ್ರಿತರನ್ನು ದೂಷಿಸಿದರು. ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 4.5 ಲಕ್ಷ ಆಫ್ಘನ್ನರು ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾರೆ, ಆದರೆ ಅಫ್ಘಾನಿಸ್ತಾನಕ್ಕೆ ಹಿಂತಿರುಗಿಲ್ಲ ಎಂದಿದ್ದಾರೆ.
ಉಗ್ರರನ್ನು ಬಿಡುಗಡೆ ಮಾಡಲು ಇಮ್ರಾನ್ ಖಾನ್ ಕಾರಣ: ಮರ್ಯಮ್
ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಮಾತನಾಡಿ, ಮಸೀದಿಯ ಆತ್ಮಹತ್ಯೆ ದಾಳಿಯ ಹಿಂದೆ ಐಎಸ್‌ಐ ಮಾಜಿ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಇದ್ದಾರೆ ಎಂದು ಆರೋಪಿಸಿದ್ದಾರೆ. ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರ ಪ್ರಾಯೋಜಕರಾದ ಜನರಲ್ ಫೈಜ್ ಹಮೀದ್ ಈ ದಾಳಿಗೆ ಜವಾಬ್ದಾರ. ಅವರನ್ನು ಇಮ್ರಾನ್ ಖಾನ್ ತನ್ನ ಕಣ್ಣು, ಕೈ ಮತ್ತು ಕಿವಿ ಎಂದು ಕರೆಯುತ್ತಿದ್ದರು. ಅವರು ಭಯೋತ್ಪಾದಕರನ್ನು ಅಫಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಆಹ್ವಾನಿಸಿದ್ದು, ಜೈಲಿನಿಂದ ಬಿಡುಗಡೆ ಮಾಡಿದ್ದು ಏಕೆ ಎಂದು ಮರ್ಯಮ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Peshawar Blast: ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ, 61 ಜನರ ಸಾವು, 150ಕ್ಕೂ ಅಧಿಕ ಮಂದಿಗೆ ಗಾಯ