ಇಸ್ಲಾಮಾಬಾದ್: ಪೇಶಾವರದಲ್ಲಿರುವ ಮಸೀದಿಯಲ್ಲಿ ಜನವರಿ 30ರಂದು ನಡೆದ ಆತ್ಮಾಹುತಿ ದಾಳಿಯಲ್ಲಿ (Peshawar Blast) ಮೃತಪಟ್ಟವರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆಯೂ 150 ದಾಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ, ಮಸೀದಿಯಲ್ಲಿ ದಾಳಿ ಮಾಡಿದ್ದು ನಮ್ಮ ಸಂಘಟನೆಯಲ್ಲ ಎಂದು ತಾಲಿಬಾನ್ ಸ್ಪಷ್ಟನೆ ನೀಡಿದೆ.
ಪೇಶಾವರದಲ್ಲಿರುವ ಮಸೀದಿಯು ಅಫಘಾನಿಸ್ತಾನದ ಗಡಿಗೆ ತುಂಬ ಕಡಿಮೆ ಅಂತರದಲ್ಲಿರುವ ಕಾರಣ ತಾಲಿಬಾನಿಗಳೇ ದಾಳಿ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ತಾಲಿಬಾನ್ ಉಗ್ರ ಸಂಘಟನೆಯು ನಾವು ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಇದುವರೆಗೆ ಯಾವ ಉಗ್ರ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಮುಂದುವರಿದ ಕಾರ್ಯಾಚರಣೆ
ವ್ಯಕ್ತಿಯೊಬ್ಬ ಆತ್ಮಾಹುತಿ ದಾಳಿ ಮಾಡಿದ ಕಾರಣ ಮಸೀದಿಯ ಒಂದು ಭಾಗವೇ ಕುಸಿದಿದ್ದು, ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಮಂಗಳವಾರ ಬೆಳಗ್ಗೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Peshawar Blast: ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ, 61 ಜನರ ಸಾವು, 150ಕ್ಕೂ ಅಧಿಕ ಮಂದಿಗೆ ಗಾಯ