ಅಮೆಜಾನ್ ಮಳೆಕಾಡು ಭಯಂಕರ ದಟ್ಟಾರಣ್ಯ (Amazon Rainforest). ವಾಯುವ್ಯ ಬ್ರೆಜಿಲ್ನ ಹೆಚ್ಚಿನ ಭಾಗವನ್ನು ಆವರಿಸಿರುವ ಈ ಕಾಡು, ಕೊಲಂಬಿಯಾ, ಪೆರು ಮತ್ತಿತರ ದೇಶಗಳಿಗೂ ಆವರಿಸಿದೆ. ಈ ಅಮೇಜಾನ್ ದಟ್ಟಾರಣ್ಯದಲ್ಲಿ ಸುಮಾರು 40 ದಿನಗಳ ಹಿಂದೆ ಸಣ್ಣ ವಿಮಾನವೊಂದು ಪತನವಾಗಿತ್ತು (Plane Crash in Amazon Rainforest). ಅಂದು ಅಪಘಾತಕ್ಕೀಡಾದ ವಿಮಾನದಲ್ಲಿದ್ದ ನಾಲ್ವರು ಮಕ್ಕಳನ್ನು ಈಗ ರಕ್ಷಿಸಲಾಗಿದೆ. 40 ದಿನಗಳಿಂದಲೂ ಆ ಮಕ್ಕಳು ಅದೇ ದಟ್ಟಾರಣ್ಯದಲ್ಲಿ ಇದ್ದರು. ಆದರೆ ಅವರನ್ನು ಪತ್ತೆ ಮಾಡುವುದು ದೊಡ್ಡ ಸವಾಲಾಗಿತ್ತು. ಬದುಕಿಯೇ ಸಿಗುತ್ತಾರೆ ಎಂಬ ಭರವಸೆಯೂ ಇರಲಿಲ್ಲ. ಆದರೀಗ ನಾಲ್ವರೂ ಮಕ್ಕಳು ಜೀವಂತವಾಗಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ, ಅಸ್ವಸ್ಥರಾಗಿದ್ದಾರೆ. ರಕ್ಷಣಾ ಸಿಬ್ಬಂದಿಯೊಂದಿಗೆ ಆ ಮಕ್ಕಳು ಇರುವ ಫೋಟೋಗಳು ಕೂಡ ವೈರಲ್ ಆಗುತ್ತಿವೆ.
ಮೇ 1ರಂದು ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯದಲ್ಲಿ ಸೆಸ್ನಾ ಎಂಬ ವಿಮಾನ ಪತನವಾಗಿತ್ತು. ಒಂದೇ ಎಂಜಿನ್ನ ಸಣ್ಣ ವಿಮಾನದಲ್ಲಿ ಮಹಿಳೆಯೊಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ಪ್ರಯಾಣ ಮಾಡುತ್ತಿದ್ದರು. ಹಾಗೇ ಇನ್ನೊಬ್ಬ ಸ್ಥಳೀಯ ಮುಖಂಡ ಇದ್ದರು. ಪೈಲೆಟ್ ಸೇರಿ ಒಟ್ಟು ಏಳುಮಂದಿ ವಿಮಾನದಲ್ಲಿದ್ದರು. ಆದರೆ ವಿಮಾನ ತಲುಪಬೇಕಾದ ಸ್ಥಳ ತಲುಪದೆ, ಅಮೇಜಾನ್ ಮಳೆಕಾಡಿನಲ್ಲಿ ಅಪಘಾತಕ್ಕೀಡಾಗಿತ್ತು. ಅದೊಂದು ತೀರ ದುರ್ಗಮ ಪ್ರದೇಶವಾಗಿತ್ತು. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ಪಡೆಗಳು ಅಲ್ಲಿಗೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದವು. ನಾಲ್ಕು ಮಕ್ಕಳ ಅಮ್ಮ ಮ್ಯಾಗ್ಡಲೀನಾ ಮುಕುಟುಯ್ ವೇಲೆನ್ಸಿಯಾ, ಇನ್ನೊಬ್ಬ ಸ್ಥಳೀಯ ಮುಖಂಡ ಮತ್ತು ಪೈಲೆಟ್ ಮೃತಪಟ್ಟಿದ್ದು, ಆ ಮೂವರ ಶವವೂ ಪತ್ತೆಯಾಯಿತು. ಆದರೆ ನಾಲ್ವರು ಮಕ್ಕಳ ಸುಳಿವೇ ಇರಲಿಲ್ಲ. ಹಾಗಂತ ರಕ್ಷಣಾ ಪಡೆಗಳು ಪ್ರಯತ್ನವನ್ನೂ ಬಿಟ್ಟಿರಲಿಲ್ಲ. ಇದೀಗ 40 ದಿನಗಳ ಬಳಿಕ ಮಕ್ಕಳು ಸಿಕ್ಕಿದ್ದಾರೆ.
ನಾಲ್ವರು ಮಕ್ಕಳು ಸುರಕ್ಷಿತವಾಗಿ ಸಿಕ್ಕಿದ್ದರ ಬಗ್ಗೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೋ ಪೆಡ್ರೋ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಕೊಲಂಬಿಯಾ ಕಾಡಿನಲ್ಲಿ 40 ದಿನಗಳ ಹಿಂದೆ ಕಳೆದು ಹೋಗಿದ್ದ 4 ಮಕ್ಕಳು ಇದೀಗ ಜೀವಂತವಾಗಿ ಸಿಕ್ಕಿದ್ದಾರೆ. ನಮ್ಮ ಇಡೀ ದೇಶಕ್ಕೇ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಮಕ್ಕಳು ಮಿಲಿಟರಿ ಸಿಬ್ಬಂದಿಯೊಂದಿಗೆ ಇರುವ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೇ, ಈ ಮಕ್ಕಳ ಹೆಸರು ಲೆಸ್ಲಿ ಜಾಕೊಬೊಂಬೈರ್ ಮುಕುಟುಯ್ (13), ಸೊಲೀನಿ ಜಾಕೊಬೊಂಬೈರ್ ಮುಕುಟುಯ್ (9), ಟಿಯೆನ್ ರಾನೋಕ್ ಮುಕುಟುಯ್ (4), ಮತ್ತು ಕ್ರಿಸ್ಟಿನ್ ರಾನೋಕ್ ಮುಕುಟುಯ್. ಇವರಲ್ಲಿ ಈ ಕ್ರಿಸ್ಟಿನ್ ರಾನೋಕ್ ಇನ್ನೂ 11 ತಿಂಗಳ ಶಿಶು ಎನ್ನಲಾಗಿದೆ. ಸದ್ಯ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ: ಹಾವು ಕಚ್ಚಿ ಕರ್ತವ್ಯನಿರತ ಅರಣ್ಯ ಅಧಿಕಾರಿ ಸಾವು; ಅಪ್ಪನಿಗೇನಾಯ್ತು ಎಂಬ 3 ವರ್ಷದ ಮಗಳ ಪ್ರಶ್ನೆಗೆ ಅಮ್ಮ ನಿರುತ್ತರ
ಮಕ್ಕಳ ಪತ್ತೆಗಾಗಿ ಕಾರ್ಯಾಚರಣೆ ಚುರುಕಾಗಿ ನಡೆದಿತ್ತು 150 ಯೋಧರು, ಇನ್ನಿತರ ರಕ್ಷಣಾ ದಳಗಳ ಸಿಬ್ಬಂದಿ, ಸ್ಥಳೀಯರು ಪಾಲ್ಗೊಂಡಿದ್ದರು. ಶ್ವಾನಗಳ ಸಹಾಯ ತೆಗೆದುಕೊಳ್ಳಲಾಗಿತ್ತು. ದಟ್ಟವಾದ ಮಂಜು, ಮುಸುಕಾದ ವಾತಾವರಣ, ದೊಡ್ಡದೊಡ್ಡ ಮರಗಳು, ಪೊದೆಗಳು ಕಾರ್ಯಾಚರಣೆಗೆ ಸವಾಲೊಡ್ಡಿದ್ದವು. ಏನೇ ಆದರೂ ಮಕ್ಕಳನ್ನು ಹೇಗಾದರೂ ಹುಡುಕಲೇಬೇಕು ಎಂದು ರಕ್ಷಣಾ ಸಿಬ್ಬಂದಿ ಪಣ ತೊಟ್ಟಿದ್ದರು. ಅದರಂತೆ ಹುಡುಕಿ, ಹೆಲಿಕಾಪ್ಟರ್ ಮೂಲಕ ಕರೆದುಕೊಂಡು ಬಂದಿದ್ದಾರೆ.