Site icon Vistara News

Narendra Modi: ಚುನಾವಣೆ ಗೆದ್ದ ಪುಟಿನ್‌ಗೆ ಮೋದಿ ಕರೆ; ಭಾರತ-ರಷ್ಯಾ ಮಹತ್ವದ ತೀರ್ಮಾನ

Narendra Modi And Vladimir Putin

PM Narendra Modi Congratulates Putin On Reelection, Vows to Expand India-Russia Ties

ನವದೆಹಲಿ: ರಷ್ಯಾದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ (Russia Presidential Election) ಬಹುಮತ ಸಾಧಿಸಿ, ಮತ್ತೆ ಅಧಿಕಾರದ ಗದ್ದುಗೆ ಹಿಡಿದ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರ ಜತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ವ್ಲಾಡಿಮಿರ್‌ ಪುಟಿನ್‌ ಜತೆ ಆತ್ಮೀಯವಾಗಿ ಮಾತುಕತೆ ನಡೆಸಿ, ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಅಭಿನಂದನೆ ತಿಳಿಸುವ ಜತೆಗೆ ಭಾರತ-ರಷ್ಯಾ ಅಭಿವೃದ್ಧಿ ಕುರಿತು ಕೂಡ ಮೋದಿ ಮಾತುಕತೆ ನಡೆಸಿದ್ದಾರೆ.

“ವ್ಲಾಡಿಮಿರ್‌ ಪುಟಿನ್‌ ಜತೆ ಮಾತುಕತೆ ನಡೆಸಿದೆ. ರಷ್ಯಾದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಅವರಿಗೆ ಅಭಿನಂದನೆ ತಿಳಿಸಿದೆ. ಮುಂದಿನ ದಿನಗಳಲ್ಲೂ ಭಾರತ ಹಾಗೂ ರಷ್ಯಾ ಸಂಬಂಧ ವೃದ್ಧಿ, ಪರಸ್ಪರ ಸಹಕಾರದೊಂದಿಗೆ ಏಳಿಗೆ, ವ್ಯೂಹಾತ್ಮಕ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ಕುರಿತು ಕೂಡ ಚರ್ಚಿಸಲಾಯಿತು” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪೋಸ್ಟ್‌ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಗೆಲುವು ಸಾಧಿಸಿದ ಪುಟನ್‌ ಅವರಿಗೆ ಮೋದಿ ಸಾಮಾಜಿಕ ಜಾಲತಾಣದ ಮೂಲಕವೂ ಶುಭ ಕೋರಿದ್ದರು.

ವ್ಲಾಡಿಮಿರ್‌ ಪುಟಿನ್‌ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮುಂದಿನ ಆರು ವರ್ಷಗಳವರೆಗೆ ವ್ಲಾಡಿಮಿರ್‌ ಪುಟಿನ್‌ ಅವರೇ ರಷ್ಯಾ ಅಧ್ಯಕ್ಷರಾಗಿ ಇರಲಿದ್ದಾರೆ. ಇವರು ಆರು ವರ್ಷ ರಷ್ಯಾ ಅಧ್ಯಕ್ಷರಾಗಿ ಆಡಳಿತ ನಡೆಸಿದರೆ ರಷ್ಯಾದ 200 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಗೆಲುವು ಸಾಧಿಸಿದ ಬಳಿಕ ಮೊದಲ ಭಾಷಣ ಮಾಡಲು ವೇದಿಕೆ ಏರುತ್ತಲೇ ಅವರ ಬೆಂಬಲಿಗರು, ಪುಟಿನ್‌ ಪುಟಿನ್‌, ರಷ್ಯಾ ರಷ್ಯಾ ಎಂಬುದಾಗಿ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ರಷ್ಯಾದ ಪ್ರಮುಖ ಪ್ರತಿಪಕ್ಷವು ಕೇವಲ ಶೇ.4ರಷ್ಟು ಮತಗಳನ್ನು ಪಡೆದಿದೆ.

ಇದನ್ನೂ ಓದಿ: Vladimir Putin: ಚುನಾವಣೆ ಗೆದ್ದ ಬೆನ್ನಲ್ಲೇ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಪುಟಿನ್‌!

ಮಹಾಯುದ್ಧದ ಎಚ್ಚರಿಕೆ ನೀಡಿದ ಪುಟಿನ್‌

ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ವ್ಲಾಡಿಮಿರ್‌ ಪುಟಿನ್‌ ಅವರು ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ್ದಾರೆ. “ನ್ಯಾಟೋ ಪಡೆಗಳು ಉಕ್ರೇನ್‌ನಲ್ಲಿ ಬೀಡು ಬಿಟ್ಟಿರುವುದು ಮೂರನೇ ಮಹಾಯುದ್ಧಕ್ಕೆ ಪ್ರಚೋದನೆ ನೀಡುವಂತಿದೆ. ಆದರೆ, ಇದು ಅವರಿಗೆ ಔಚಿತ್ಯವಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ಮೃತಪಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಹೀಗಿದ್ದರೂ ಪ್ರಚೋದನೆ ನೀಡುತ್ತಿರುವುದು ಅಪಾಯಕಾರಿಯಾಗಿದೆ. ಹಾಗಾಗಿ, ನಾವು ಉಕ್ರೇನ್‌ ಮೇಲೆ ಮತ್ತೊಂದು ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಹೇಳಿದ್ದಾರೆ. ಇದು ಈಗ ಉಕ್ರೇನ್‌ ಜನರಿಗೆ ಮತ್ತಷ್ಟು ಆತಂಕ ತಂದೊಡ್ಡಿದೆ. ಇದಕ್ಕೂ ಮೊದಲು ಕೂಡ ವ್ಲಾಡಿಮಿರ್‌ ಪುಟಿನ್‌ ಅವರು ಅಣ್ವಸ್ತ್ರ ದಾಳಿಯ ಎಚ್ಚರಿಕೆ ನೀಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version