ಇಸ್ಲಾಮಾಬಾದ್: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಮಾಜಿ ಮುಖ್ಯಸ್ಥ, ಲೆಫ್ಟಿನೆಂಟ್ ಜನರಲ್ ಆಸಿಮ್ ಮುನೀರ್ (Asim Munir) ಅವರನ್ನು ಸೇನೆಯ ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಜನರಲ್ ಖಮರ್ ಜಾವೇದ್ ಬಾಜ್ವಾ ಅವರು ನವೆಂಬರ್ 29ರಂದು ನಿವೃತ್ತರಾಗುತ್ತಿರುವ ಕಾರಣ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮುನೀರ್ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.
ಹಾಗೆಯೇ, ಲೆಫ್ಟಿನೆಂಟ್ ಜನರಲ್ ಸಾಹಿರ್ ಶಮ್ಶದ್ ಮಿರ್ಜಾ ಅವರನ್ನು ಸಿಬ್ಬಂದಿ ಸಮಿತಿ ಜಂಟಿ ಮುಖ್ಯಸ್ಥರ ಚೇರ್ಮನ್ (CJCSC) ಆಗಿ ನೇಮಿಸಲಾಗಿದೆ. “ಸಾಂವಿಧಾನಿಕ ಅಧಿಕಾರವನ್ನು ಬಳಸಿ ಪಾಕಿಸ್ತಾನದ ಪ್ರಧಾನಿ ಅವರು ಸೇನೆ ಮುಖ್ಯಸ್ಥ ಹಾಗೂ CJCSC ಅವರನ್ನು ನೇಮಿಸಿದ್ದಾರೆ” ಎಂದು ಪಾಕ್ ಸರ್ಕಾರ ತಿಳಿಸಿದೆ.
ಯಾರು ಈ ಆಸಿಮ್ ಮುನೀರ್?
ಆಸಿಮ್ ಮುನೀರ್ ಪಾಕ್ ಸೇನೆಯಲ್ಲಿ ಜನರಲ್ ಖಮರ್ ಜಾವೇದ್ ಬಾಜ್ವಾ ನಂತರದ ಹಿರಿಯ ಸೇನಾಧಿಕಾರಿಯಾಗಿದ್ದಾರೆ. ಪಾಕಿಸ್ತಾನದ ಪ್ರಬಲ ಗುಪ್ತಚರ ಸಂಸ್ಥೆಗಳಾದ ಐಎಸ್‌ಐ ಹಾಗೂ ಮಿಲಿಟರಿ ಇಂಟಲಿಜೆನ್ಸ್ (MI)ನ ಮುಖ್ಯಸ್ಥರಾಗಿದ್ದ ಇವರು ಸೇನೆಯ ಹಲವು ಉನ್ನತ ಹುದ್ದೆಗಳನ್ನೂ ನಿಭಾಯಿಸಿದ್ದಾರೆ. ಸದ್ಯ ಸೇನೆಯ ಕೇಂದ್ರ ಕಚೇರಿಯಲ್ಲಿ ಕಾರ್ಟರ್‌ಮಾಸ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, 2019ರಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದಾಗ ಇವರೇ ಪಾಕ್ ಐಎಸ್‌ಐ ಮುಖ್ಯಸ್ಥರಾಗಿದ್ದರು.
ಇದನ್ನೂ ಓದಿ | ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸಿದ್ಧ, ಅಂಥ ಯಾವುದೇ ಆದೇಶ ಬಂದರೂ ನಾವು ರೆಡಿ ಎಂದ ಸೇನಾ ಜನರಲ್ ದ್ವಿವೇದಿ