Site icon Vistara News

POK: ಪಿಒಕೆ ತನ್ನ ಭಾಗವಲ್ಲ ಎಂದು ಅಧಿಕೃತವಾಗಿಯೇ ಒಪ್ಪಿಕೊಂಡ ಪಾಕಿಸ್ತಾನ!

POK

POK

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ(POK) ತನ್ನ ಭಾಗವಲ್ಲ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಪಿಒಕೆಯನ್ನು ಆಜಾದ್ ಕಾಶ್ಮೀರ ಅಥವಾ ಎಜೆಕೆ ಎಂದು ಉಲ್ಲೇಖಿಸಿರುವ ಪಾಕಿಸ್ತಾನ, ವಿವಾದಿತ ಭೂಮಿಗೆ ಸಂಬಂಧಿಸಿದಂತೆ ತನ್ನದೇ ಆದ ಸಂದಿಗ್ಧತೆ ಇದೆ ಎಂದು ಹೇಳಿದೆ. ಪಾಕ್ ಆಕ್ರಮಿತ ಕಾಶ್ಮೀರವು ವಿದೇಶಿ ಭೂ ಪ್ರದೇಶ ಎಂದು ಪಾಕಿಸ್ತಾನದ ಸರ್ಕಾರಿ ವಕೀಲರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಪಿಒಕೆ ಭಾರತದ ಅವಿಭಾಜ್ಯ ಭೂ ಭಾಗ ಎನಿಸಿಕೊಂಡಿದೆ. ಆದರೆ ಪಾಕಿಸ್ತಾನ ಈ ಪ್ರದೇಶವನ್ನು ಅತಿಕ್ರಮಿಸಲು ಯತ್ನಿಸುತ್ತಿದ್ದು, ಅದನ್ನು ಆಜಾದ್ ಕಾಶ್ಮೀರ ಎಂದು ಹೇಳಿಕೊಂಡಿದೆ. ಇದೀಗ ಪಿಒಕೆ ವಿದೇಶಿ ಭೂ ಪ್ರದೇಶವಾಗಿದೆ ಮತ್ತು ಅದರ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್ ಹೈಕೋರ್ಟ್ ಮುಂದೆ ಒಪ್ಪಿಕೊಂಡಿದೆ.

ಪ್ರಕರಣದ ಹಿನ್ನೆಲೆ

ಸದ್ಯ ಕಾಶ್ಮೀರಿ ಕವಿ ಮತ್ತು ಪತ್ರಕರ್ತ ಅಹ್ಮದ್ ಫರ್ಹಾದ್ ಶಾ ಜೂನ್‌ 2ರ ತನಕ ಆಜಾದ್‌ ಕಾಶ್ಮೀರದಲ್ಲಿ ಬಂಧನದಲ್ಲಿದ್ದಾರೆ ಎಂದು ಫೆಡರಲ್‌ ಪ್ರಾಸಿಕ್ಯೂಟರ್‌ ಜನರಲ್‌ ಶುಕ್ರವಾರ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಈ ವೇಳೆ ಆಜಾದ್‌ ಕಾಶ್ಮೀರ ವಿದೇಶಿ ಪ್ರದೇಶವಾಗಿರುವುದರಿಂದ ಅಹ್ಮದ್ ಫರ್ಹಾದ್ ಶಾ ಅವರನ್ನು ಇಸ್ಲಾಮಾಬಾದ್‌ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮೇ 15ರಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ರಾವಲ್ಪಿಂಡಿಯಿಂದ ಅಹ್ಮದ್ ಫರ್ಹಾದ್ ಶಾ ಅವರನ್ನು ಅಪಹರಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ಇಸ್ಲಾಮಾಬಾದ್ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ವಕೀಲರ ವಾದವನ್ನು ಆಲಿಸಿದ ಇಸ್ಲಾಮಾಬಾದ್‌ ಹೈಕೋರ್ಟ್‌, ಆಜಾದ್‌ ಕಾಶ್ಮೀರವು ವಿದೇಶಿ ಭೂಪ್ರದೇಶವಾಗಿದ್ದರೆ ಮತ್ತು ಪಾಕಿಸ್ತಾನದ ಅವಿಭಾಜ್ಯ ಅಂಗವಲ್ಲದಿದ್ದರೆ, ಪಾಕಿಸ್ತಾನಿ ಮಿಲಿಟರಿ ಮತ್ತು ಪಾಕಿಸ್ತಾನಿ ರೇಂಜರ್‌ಗಳು ಪಾಕಿಸ್ತಾನದಿಂದ ಇಲ್ಲಿಗೆ ಹೇಗೆ ಪ್ರವೇಶಿಸಿದರು? ಎಂದು ಪ್ರಶ್ನಿಸಿತು. ವಿಚಾರಣೆಯ ವೇಳೆ ಕೋರ್ಟ್‌, ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಜನರನ್ನು ಬಲವಂತವಾಗಿ ಅಪಹರಿಸುವ ಅಭ್ಯಾಸವನ್ನು ಮುಂದುವರಿಸಿವೆ ಎಂದು ಚಾಟಿ ಬೀಸಿದೆ.

ಅಹ್ಮದ್ ಫರ್ಹಾದ್ ಶಾ ಅವರನ್ನು ಧೀರ್ಕೋಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ವಿಚಾರ ನ್ಯಾಯಾಲಯದ ವಾದದ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಪಿಒಕೆಯಲ್ಲಿ ಅಹ್ಮದ್ ಫರ್ಹಾದ್ ಶಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ರಾವಲ್ಪಿಂಡಿಯಲ್ಲಿರುವ ತಮ್ಮ ನಿವಾಸದಿಂದ ಫರ್ಹಾದ್ ಶಾ ಅವರನ್ನು ಅಪಹರಿಸಿದ ಬಗ್ಗೆ ಅವರ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Exit mobile version