ಲಿಸ್ಬನ್, ಪೋರ್ಚುಗಲ್: ಐರೋಪ್ಯ ಒಕ್ಕೂಟದ ಪ್ರಮುಖ ರಾಷ್ಟ್ರವಾಗಿರುವ ಪೋರ್ಚುಗಲ್‌ನಲ್ಲಿ(Portugal) 1950ರಿಂದ ಇಲ್ಲಿಯ ತನಕ 5000 ಮಕ್ಕಳ ಮೇಲೆ ಚರ್ಚ್‌ನ ಪಾದ್ರಿಗಳು ಅತ್ಯಾಚಾರ ನಡೆಸಿದ್ದಾರೆ ಎಂದು ಸ್ವತಂತ್ರ ಆಯೋಗವೊಂದು ವರದಿ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಸಂತ್ರಸ್ತರನ್ನು ಸಂದರ್ಶಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಜಗತ್ತಿನಾದ್ಯಂತ ಚರ್ಚುಗಳಲ್ಲಿ ಶಿಶುಕಾಮ ಬಗ್ಗೆ ಆಗಾಗ ವರದಿಗಳಾಗುತ್ತಲೇ ಇರುತ್ತವೆ. ಹಾಗಾಗಿ, ಈ ಸಮಸ್ಯೆಯನ್ನು ಬಗೆಹರಿಸುವ ಒತ್ತಡದಲ್ಲಿ ಪೋಪ್ ಫ್ರಾನ್ಸಿಸ್ ಇದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ. ಕಟ್ಟರ್ ಕ್ಯಾಥೋಲಿಕ್ ದೇಶವಾಗಿರುವ ಪೋರ್ಚುಗಲ್‌ನಲ್ಲಿ ಚರ್ಚ್‌ಗಳಿಂದಲೇ ನಿಯೋಜಿಸಲ್ಪಟ್ಟ ಕಮಿಷನ್, ಕಳೆದ ವರ್ಷ 5000ಕ್ಕೂ ಹೆಚ್ಚು ಸಂತ್ರಸ್ತರನ್ನು ಮಾತನಾಡಿಸಿ, ತನ್ನ ವರದಿಯನ್ನು ಪ್ರಕಟಿಸಿದೆ.
ಕನಿಷ್ಠ 4815 ಮಕ್ಕಳ ಮೇಲೆ ಅತ್ಯಾಚಾರ ನಡೆದಿರುವುದರ ಬಗ್ಗೆ ಸಾಕ್ಷ್ಯಗಳನ್ನು ನುಡಿಯಲಾಗಿದೆ. ಇದೊಂದು ಬೃಹತ್ ಜಾಲವಾಗಿದೆ ಎಂದು ಕಮಿಷನ್ ಮುಖ್ಯಸ್ಥ ಪೆದ್ರೋ ಸ್ಟ್ರೆಚ್ಟ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಚರ್ಚ್‌ನ ಹಿರಿಯ ಅಧಿಕಾರಿಗಳೂ ಭಾಗಿಯಾಗಿದ್ದ ಲಿಸ್ಬನ್ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿಯನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡರು.
ಪೋರ್ಚುಗಲ್ ಮಾತ್ರವಲ್ಲದೇ, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಐರ್ಲೆಂಡ್ ಮತ್ತು ನೆದರ್ಲೆಂಡ್‌ಗಳಲ್ಲೂ ಚರ್ಚ್‌ಗಳಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರ ಕುರಿತು ತನಿಖೆಗೆ ಚಾಲನೆ ನೀಡಲಾಗಿದೆ.