ಅಬುಧಾಬಿ: ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್ (73) ಇಂದು ನಿಧನರಾದರು. ಈ ಬಗ್ಗೆ ಯುಎಇ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದ್ದು, ಇಂದಿನಿಂದ 40 ದಿನಗಳವರೆಗೆ ರಾಷ್ಟ್ರದಲ್ಲಿ ಶೋಕಾಚರಣೆ ಘೋಷಿಸಿದೆ. ಈ ಅವಧಿಯಲ್ಲಿ ರಾಷ್ಟ್ರದ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಮತ್ತು ಇಂದಿನಿಂದ ಮೂರು ದಿನಗಳ ಕಾಲ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ರಜೆ ನೀಡಲಾಗಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ. ಶೇಖ್ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್ ಅವರು ಯುಎಇಯ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಾಧಿಕಾರಿಯಾಗಿ 2004ರ ನವೆಂಬರ್ 3ರಿಂದಲೂ ಕಾರ್ಯನಿರ್ವಹಿಸುತ್ತಿದ್ದರು.
1948ರಲ್ಲಿ ಜನಿಸಿದ್ದ ಶೇಖ್ ಖಲೀಫಾ ಯುಎಇಯ ಎರಡನೇ ಅಧ್ಯಕ್ಷ. ಇವರ ತಂದೆ ಶೇಖ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಮೊದಲ ಅಧ್ಯಕ್ಷರಾಗಿದ್ದರು. ಇವರು ತೀರಿಕೊಂಡ ಬಳಿಕ ಹಿರಿಯ ಪುತ್ರನಾದ ಶೇಖ್ ಖಲೀಫಾ ಆ ಸ್ಥಾನಕ್ಕೆ ಏರಿದ್ದರು. ಯುಎಇಯ ಅಧ್ಯಕ್ಷರಾದ ಬಳಿಕ ಶೇಖ್ ಖಲೀಫಾ, ಇಲ್ಲಿನ ಸಂಯುಕ್ತ ಸರ್ಕಾರ ಮತ್ತು ಅಬುಧಾಬಿ ಸರ್ಕಾರಗಳ ಮರುರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಆಡಳಿತಾವಧಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಅದ್ಭುತ ಅಭಿವೃದ್ಧಿಯಾಗಿದೆ.
ಯುಎಇ ಸಂವಿಧಾನದ ಪ್ರಕಾರ, ಮುಂದಿನ ಅಧ್ಯಕ್ಷರ ಆಯ್ಕೆ ಮಾಡಲು ಸಂಯಕ್ತ ಮಂಡಳಿ ಸಭೆ ಕರೆದು, ಚರ್ಚೆಗಳೆಲ್ಲ ಮುಗಿದು ಹೊಸ ಅಧ್ಯಕ್ಷರು ನೇಮಕಗೊಳ್ಳುವವರೆಗೂ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರೇ ಅಧ್ಯಕ್ಷರಾಗಿರುತ್ತಾರೆ.
ಇದನ್ನೂ ಓದಿ | Explainer: ಭಾರತೀಯರ ಫೇವರಿಟ್ ಆಗುವತ್ತ ಯುಎಇ, ಏನಿದರ ವಿಶೇಷ?