ತಮ್ಮ ಕಾಲದ ಇತಿಹಾಸದ ಗತಿಯನ್ನೇ ಬದಲಿಸಿದ ಅನೇಕ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡಿದ್ದ ಮಿಖಾಯಿಲ್ ಗೊರ್ಬಚೆವ್ ಅವರು ಇದರಿಂದಾಗಿಯೇ ತಮ್ಮ ನೆಲದಲ್ಲಿ ಅಪ್ರಿಯರಾಗಿದ್ದರು. ಆದರೆ ಅಮೆರಿಕ, ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಪ್ರಿಯರಾದ ಜಾಗತಿಕ ನಾಯಕರೆನಿಸಿದ್ದರು. ರಷ್ಯಾದ ಈಗಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಅನೇಕ ನೀತಿಗಳನ್ನು ಗೊರ್ಬಚೆಫ್ ಖಂಡಿಸುತ್ತಿದ್ದುದರಿಂದ, ಇಬ್ಬರ ನಡುವೆ ಹಿತಕರ ಸಂಬಂಧ ಇರಲಿಲ್ಲ. ವಾಸ್ತವವಾಗಿ, ಗೊರ್ಬಚೆವ್ಫ್ ತಂದ ಅನೇಕ ಸುಧಾರಣೆಗಳನ್ನು ಪುಟಿನ್ ರಿವರ್ಸ್ ಗೇರ್‌ಗೆ ಹಾಕಿದ್ದರು.
1985-1991ರ ನಡುವೆ ಗೊರ್ಬಚೆವ್ ಸೋವಿಯತ್ ರಷ್ಯ ಒಕ್ಕೂಟದ ಕಮ್ಯುನಿಸ್ಟ್ ಪಾರ್ಟಿಯ ಮಹಾಕಾರ್ಯದರ್ಶಿಯಾಗಿದ್ದರು. ಆಗ ಸೋವಿಯತ್ ರಷ್ಯಾ ಒಕ್ಕೂಟ ಅಸ್ತಿತ್ವದಲ್ಲಿತ್ತು. ಆದರೆ ಒಕ್ಕೂಟದ ಅಂಗವಾಗಿದ್ದ ಅನೇಕ ರಾಜ್ಯಗಳು ಪ್ರತ್ಯೇಕವಾಗಲು ಒತ್ತಾಯಿಸುತ್ತಿದ್ದವು. ಪ್ರತಿಭಟನೆಗಳು ನಡೆದಿದ್ದವು. ಈ ಒಳಗುದಿಗೆ ಅಂತ್ಯ ಹಾಡಿದವರು ಗೊರ್ಬಚೆವ್. 1991ರ ಡಿಸೆಂಬರ್ 31ರಂದು ಸೋವಿಯತ್ ಒಕ್ಕೂಟದ ವಿಸರ್ಜನೆ, ಹದಿನೈದು ಸ್ವಾಯತ್ತ ದೇಶಗಳ ರಚನೆಗೆ ಗೊರ್ಬಚೆವ್ ಸಹಿ ಹಾಕಿದರು. ಇದರಿಂದ ಉಕ್ರೇನ್, ತಜಿಕಿಸ್ತಾನ್, ಉಜ್ಬೆಕಿಸ್ತಾನ್, ಆರ್ಮೇನಿಯಾ, ಬೆಲಾರುಸ್ ಸೇರಿದಂತೆ ಹದಿನೈದು ದೇಶಗಳು ರಚನೆಯಾಗಿದ್ದವು. ಇದಕ್ಕೆ ಅನೇಕ ರಾಜಕೀಯ, ಆರ್ಥಿಕ ಬೆಳವಣಿಗೆಗಳು ಹಿನ್ನೆಲೆಯಾಗಿದ್ದವು. ಸಾಕಷ್ಟು ವಿಸ್ತಾರವಾಗಿದ್ದ ಒಕ್ಕೂಟದ ಮೂಲೆ ಮೂಲೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಅಮೆರಿಕ ಜತೆಗಿನ ಶೀತಲ ಸಮರದ ಹಿನ್ನೆಲೆಯಲ್ಲೂ, ಒಟ್ಟಾರೆ ದೇಶ ಶಿಥಿಲವಾಗಿತ್ತು. ದೇಶ ಒಡೆಯದೆ ಬೇರೆ ದಾರಿಯೇ ಇರಲಿಲ್ಲ.
ಇದಾದ ಬಳಿಕ ಸೋವಿಯತ್ ಸ್ವಲ್ಪ ಹಗುರವಾಗಿ ಉಸಿರಾಡಲು ಸಾಧ್ಯವಾಯಿತು. ಆದರೆ ಗೊರ್ಬಚೆವ್ ಅವರ ನಿಕಟವರ್ತಿಗಳೇ ಬಂಡೆದ್ದರು. ಅವರನ್ನು ಗೃಹಬಂಧನದಲ್ಲಿ ಇಡಲಾಯಿತು. ಈ ಬಂಡಾಯ ಹಾಗೂ ಗೊರ್ಬಚೆವ್ ಕೊಲೆಯತ್ನ ವಿಫಲವಾಯಿತು. ಬೋರಿಸ್ ಯೆಲ್‌ಸ್ತಿನ್ ರಷ್ಯದ ನೂತನ ಅಧ್ಯಕ್ಷರಾದರು. ಸೋವಿಯತ್ ರಷ್ಯ ಒಕ್ಕೂಟ ವಿಸರ್ಜನೆಯಾದುದರಿಂದ ಅದರ ಅಧ್ಯಕ್ಷರು (ಗೊರ್ಬಚೆವ್) ಅಪ್ರಸ್ತುತರಾದರು. ಹೀಗಾಗಿ ಗೊರ್ಬಚೆವ್, ʼಸೋವಿಯತ್ ರಷ್ಯಾ ಒಕ್ಕೂಟದ ಕೊನೆಯ ನಾಯಕʼ ಎನಿಸಿಕೊಂಡರು.
ಇದನ್ನೂ ಓದಿ | Mikhail Gorbachev | ಆಧುನಿಕ ರಷ್ಯದ ನಿರ್ಮಾತೃ ಮಿಖಾಯಿಲ್ ಗೊರ್ಬಚೆವ್ ನಿಧನ
ಅಮೆರಿಕ ಕೂಡ ಸೋವಿಯತ್ ರಷ್ಯ ಒಕ್ಕೂಟದ ವಿಸರ್ಜನೆಯನ್ನೇ ಬಯಸಿತ್ತಾದ್ದರಿಂದ, ಗೊರ್ಬಚೆವ್ ಅಮೆರಿಕಕ್ಕೂ ಅಚ್ಚುಮೆಚ್ಚಿನ ನಾಯಕ ಎನಿಸಿಕೊಂಡರು. ಅವರನ್ನು ʻಗೋರ್ಬಿʼ ಎಂದೇ ಕರೆಯಲಾಗುತ್ತಿತ್ತು. ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಮುಂತಾದವರ ಜತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಗೊರ್ಬಚೆವ್, ಶೀತಲ ಸಮರಕ್ಕೆ ಅಂತ್ಯ ಹಾಡುವಲ್ಲಿ ಮಹತ್ವದ ಹೆಜ್ಜೆ ಇಟ್ಟರು. ಭಾರತದ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಎರಡು ಬಾರಿ ದೇಶಕ್ಕೆ ಭೇಟಿ ನೀಡಿದ್ದರು. ಚೀನಾದ ಆಕ್ರಮಣಕಾರಿ ನೀತಿಯನ್ನು ಎದುರಿಸುವ ಕುರಿತು, ಭಾರತಕ್ಕೆ ರಷ್ಯಾದಿಂದ ಶಸ್ತ್ರಾಸ್ತ್ರ ನೆರವಿನ ಕುರಿತು ಅವರು ಸಕಾರಾತ್ಮಕ ಧೋರಣೆ ಪ್ರದರ್ಶಿಸಿದ್ದರು.
ಆದರೆ ಗೊರ್ಬಚೆವ್ ಅವರು ಒಕ್ಕೂಟವನ್ನು ಒಡೆದು ಪ್ರಜಾಸತ್ತಾತ್ಮಕ ಆಡಳಿತವನ್ನು ತಂದ ಬಗ್ಗೆ ರಷ್ಯಾದ ಒಳಗಿನ ಸಾಂಪ್ರದಾಯಿಕ ಕಮ್ಯುನಿಸ್ಟ್ ಒಲವಿನ ಜನತೆಯಲ್ಲಿ ಸಹಮತ ಇರಲಿಲ್ಲ. ಹೀಗಾಗಿ ಶೇ.70ಕ್ಕೂ ಅಧಿಕ ಮಂದಿ ಗೊರ್ಬಚೆವ್ ಅವರನ್ನು ದ್ವೇಷಿಸುತ್ತಿದ್ದರು. ಪುಟಿನ್ ಸೇರಿದಂತೆ ನಂತರದ ನಾಯಕರು, ಗೊರ್ಬಚೆವ್ ತಂದ ಪ್ರಜಾಸತ್ತಾತ್ಮಕ ನೀತಿಗಳನ್ನು ಒಂದೊಂದಾಗಿ ಹಿಂದೆಗೆದುಕೊಂಡು, ಮರಳಿ ಕಮ್ಯುನಿಸ್ಟ್ ಪಕ್ಷದ ಸರ್ವಾಧಿಕಾರದತ್ತ ದೇಶವನ್ನು ಮುನ್ನಡೆಸಿದರು. ಪುಟಿನ್ ಅವರ ಅನೇಕ ನಡೆಗಳನ್ನು ನಂತರ ಗೊರ್ಬಚೆವ್ ಅವರು ಖಂಡಿಸಿದ್ದರು. ಹೀಗಾಗಿ ಅವರ ನಡುವೆ ಆತ್ಮೀಯತೆ ಇರಲಿಲ್ಲ.
ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಜತೆಗೆ ಮಾತುಕತೆ ನಡೆಸಿದ ಅವರು ಉಭಯ ದೇಶಗಳ ನಡುವೆ ಐತಿಹಾಸಿಕ ʼಪರಮಾಣು ಅಸ್ತ್ರ ಬಳಕೆ ತಡೆʼ ಒಪ್ಪಂದಕ್ಕೆ ಸಹಿ ಹಾಕಿದರು. ಎರಡನೇ ಮಹಾಯುದ್ಧದ ಕೊನೆಯ ಸಂದರ್ಭದಲ್ಲಿ ಜರ್ಮನಿ ಎರಡಾಗಿ ಒಡೆದುಹೋಗಿತ್ತು. ಪೂರ್ವ ಜರ್ಮನಿ ರಷ್ಯದ ವಶದಲ್ಲಿತ್ತು ಹಾಗೂ ಪಶ್ಚಿಮ ಜರ್ಮನಿ ಯುರೋಪ್ ದೇಶಗಳ ಕಡೆಗಿತ್ತು. 1961ರಲ್ಲಿ ಇವುಗಳ ನಡುವೆ ಬರ್ಲಿನ್ ಗೋಡೆ ನಿರ್ಮಾಣವಾಯಿತು. 1989ರಲ್ಲಿ ಈ ಗೋಡೆ ಬೀಳಿಸಿ ಪೂರ್ವ ಹಾಗೂ ಪಶ್ಚಿಮ ಜರ್ಮನಿಗಳು ಒಂದಾಗುವ ಸಂದರ್ಭದಲ್ಲಿ, ರಷ್ಯದ ಸೇನೆಯನ್ನು ಹಿಂದೆಗೆದುಕೊಂಡು ಜರ್ಮನಿ ಒಂದಾಗಲು ಗೊರ್ಬಚೆವ್ ನೆರವಾದರು. ಜಾಗತಿಕ ಶಾಂತಿಗೆ ನೀಡಿದ ಈ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ 1990ರ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಯಿತು.
ಇದನ್ನೂ ಓದಿ | ಪುಟಿನ್ ಪ್ರೇಯಸಿಯ ಮೇಲೆ ಮುಗಿಬಿದ್ದ ಯುರೋಪ್! ಯಾರೀಕೆ ಕಬಯೇವಾ?
ಆದರೆ ಪುಟಿನ್ ಸೇರಿದಂತೆ ಇಂದಿಗೂ ರಷ್ಯಾದ ನಾಯಕತ್ವ, ಯುಎಸ್‌ಎಸ್‌ಆರ್ ಕಾಲದ ಆಕ್ರಮಣಕಾರಿ ಸಾಧನೆಗಳನ್ನು ನೆನಪಿಸಿಕೊಂಡು ಅಭಿಮಾನಪಟ್ಟುಕೊಳ್ಳುತ್ತದೆ. ಒಕ್ಕೂಟ ವಿಸರ್ಜನೆಯ ಬಳಿಕ ಆರ್ಥಿಕ ಬಿಕ್ಕಟ್ಟು ಹಾಗೂ ಬಡತನದ ದಿನಗಳು ದೇಶಕ್ಕೆ ಆಗಮಿಸಿದವು. ಜಾಗತಿಕವಾಗಿ ರಷ್ಯಕ್ಕೆ ಮೊದಲಿನ ಸ್ಥಾನಮಾನ ಉಳಿಯಲಿಲ್ಲ. ಹೀಗಾಗಿ ದೇಶದೊಳಗೆ ಗೊರ್ಬಚೆವ್ ವಿವಾದಿತ ವ್ಯಕ್ತಿಯಾಗಿ ಉಳಿದರು. ಅಲ್ಲಿಂದಾಚೆಗೆ ಗೊರ್ಬಚೆವ್ ಶೈಕ್ಷಣಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡರು.
1996ರಲ್ಲಿ ರಾಜಕೀಯಕ್ಕೆ ಮರಳಲು ಅವರು ಮತ್ತೆ ಪ್ರಯತ್ನ ನಡೆಸಿದರು. ಆದರೆ ಅವರ ಪ್ರಯತ್ನ ದಾರುಣವಾಗಿ ವಿಫಲಗೊಂಡಿತು. ಪತ್ರಿಕಾ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದ ಅವರು, ತಮಗೆ ನೊಬೆಲ್ ಪ್ರಶಸ್ತಿಯಲ್ಲಿ ಬಂದ ಹಣವನ್ನು 1993ರಲ್ಲಿ ಸ್ವತಂತ್ರ ಪತ್ರಿಕೆಯೊಂದರ ಕಂಪ್ಯೂಟರ್ ಖರೀದಿಗಾಗಿ ದಾನ ಮಾಡಿದ್ದರು. ಆದರೆ ಈ ಪತ್ರಿಕೆ ಕೂಡ ಪುಟಿನ್ ಆಡಳಿತದಡಿ ತನ್ನ ಮುಕ್ತ ಅಭಿವ್ಯಕ್ತಿ ಕಳೆದುಕೊಂಡು ನುಜ್ಜುಗುಜ್ಜಾಗಿತ್ತು.
ಇತರ ರಷ್ಯನ್ ರಾಜಕೀಯ ನಾಯಕರಂತಲ್ಲದೆ ಗೊರ್ಬಚೆವ್ ಅವರು ತಮ್ಮ ಸೇವಾ ಫೌಂಡೇಶನ್‌ಗೆ ಹಣಕಾಸು ಸಂಗ್ರಹಿಸಲು ಜಾಹೀರಾತುಗಳಲ್ಲೂ ಕಾಣಿಸಿಕೊಂಡರು. ರಷ್ಯದ ಬೀದಿಗಳಲ್ಲಿ ನಡೆದುಕೊಂಡು ಅವರು ಪಿಜ್ಝಾ ಹಟ್‌ಗೆ ಹೋಗುವ ಜಾಹೀರಾತು ವಿವಾದಿತವಾಗಿತ್ತು. ರಷ್ಯಕ್ಕೆ ಅಮೆರಿಕ ಮೂಲದ ಪಿಜ್ಝಾ ಹಟ್ ಆಗಮನದ ಕ್ರೆಡಿಟ್ ಕೂಡ ಗೊರ್ಬಚೆವ್ ಅವರಿಗೆ ಸಮರ್ಪಿತವಾಗಿದೆ. ಲೂಯಿ ವೀಟ್ಟನ್ ಮುಂತಾದ ಬ್ರಾಂಡ್‌ಗಳಿಗೆ ಅವರು ರಾಯಭಾರಿಯಾಗಿದ್ದರು.
ಗ್ಲಾಸನೋಸ್ತ್ ಹಾಗೂ ಪೆರೆಸ್ತ್ರೊಯ್ಕಾಗಳು ಅವರು ರಷ್ಯಾಗೆ ಪರಿಚಯಿಸಿದ ನೂತನ ಆರ್ಥಿಕ ನೀತಿಗಳಾಗಿದ್ದವು. ಮಹತ್ವದ ಕ್ಷೇತ್ರಗಳನ್ನು ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಹಿಡಿತದಿಂದ ತಪ್ಪಿಸಿ ಬಂಡವಾಳವನ್ನು ಹೊರಗಿನಿಂದ ಆಹ್ವಾನಿಸುವ ನೆಲೆಯಿಂದ ಈ ನೀತಿಗಳನ್ನು ಪರಿಚಯಿಸಲಾಗಿತ್ತು. ಕೆಲ ಕಾಲ ಚೆನ್ನಾಗಿ ಕೆಲಸ ಮಾಡಿದ ಈ ನೀತಿಗಳನ್ನು, ಬಂಡವಾಳ ಒಟ್ಟು ಸೇರುತ್ತಿದ್ದಂತೆ ರಷ್ಯನ್ ಸರ್ಕಾರ ಒಂದೊಂದಾಗಿ ಹಿಂದೆಗೆದುಕೊಂಡು ತನ್ನ ಹಿಡಿತವನ್ನು ಬಲಪಡಿಸಿಕೊಂಡಿತು.
1999ರಲ್ಲಿ ಗೊರ್ಬಚೆವ್ ಅವರ ಸುದೀರ್ಘಕಾಲದ ಸಂಗಾತಿ ರೈಸಾ ಅವರು ಲ್ಯುಕೇಮಿಯಾದಿಂದ ಮೃತಪಟ್ಟರು. ತದನಂತರ ಗೊರ್ಬಚೆವ್ ಅವರು ಒಂಟಿಯಾಗಿ ತಮ್ಮ ಮಾಸ್ಕೋದ ಸರಳ ಮನೆಯಲ್ಲಿ ವಾಸಿಸುತ್ತಿದ್ದರು.