Site icon Vistara News

ಬಂಧನ ಭೀತಿಯಲ್ಲಿ ಇಮ್ರಾನ್‌ ಖಾನ್‌, ಮನೆಯ ಸುತ್ತ ಜಮಾಯಿಸಿದ ಪಕ್ಷದ ಕಾರ್ಯಕರ್ತರಿಂದ ಸರಕಾರಕ್ಕೆ ಸವಾಲ್‌

imran Khan1

ಇಸ್ಲಾಮಾಬಾದ್‌: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ಪೊಲೀಸರು ಅವರ ಬಂಧನಕ್ಕೆ ಯೋಜನೆ ರೂಪಿಸುತ್ತಿದ್ದರೆ, ಇನ್ನೊಂದು ಕಡೆ ಬಂಧನ ತಪ್ಪಿಸಲು ಇಮ್ರಾನ್‌ ಖಾನ್‌ ಪರ ವಕೀಲರು ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ. ಇತ್ತ ದೊಡ್ಡ ಸಂಖ್ಯೆಯಲ್ಲಿ ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ್‌ ಟೆಹ್ರೀಕ್‌ ಇ ಇನ್ಸಾಫ್‌ (ಪಿಟಿಐ) ಪಕ್ಷದ ಕಾರ್ಯಕರ್ತರು ಇಸ್ಲಾಮಾಬಾದ್‌ನಲ್ಲಿರುವ ಮನೆಯತ್ತ ಧಾವಿಸುತ್ತಿದ್ದು, ತಮ್ಮ ಬೆಂಬಲವನ್ನು ಪ್ರಕಟಿಸುತ್ತಿದ್ದಾರೆ.

ʻʻನಮ್ಮ ನಾಯಕ ಇಮ್ರಾನ್‌ ಖಾನ್‌ ಎಂದರೆ ರೆಡ್‌ ಲೈನ್‌ ಇದ್ದಂತೆ. ಅದನ್ನು ದಾಟಿ ಹೋಗಬೇಡಿ. ಹೋದರೆ ರಕ್ತಪಾತವಾದೀತುʼʼ ಎನ್ನುವ ಅರ್ಥದಲ್ಲಿ ಪಿಟಿಐ ಕಾರ್ಯಕರ್ತರು ಎಚ್ಚರಿಕೆ ನೀಡುತ್ತಿದ್ದಾರೆ. ಭಾನುವಾರ ರಾತ್ರಿಯಿಂದಲೇ ಹಲವು ಭಾಗಗಳಿಂದ ಜನರು ಅಲ್ಲಿಗೆ ಬರುತ್ತಿದ್ದು, ಪೊಲೀಸರು ಒಳಗೆ ಬರದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಯಾಕೆ ಈ ಬಂಧನ ಭೀತಿ, ಇಮ್ರಾನ್‌ ತಪ್ಪೇನು?
– ಇಮ್ರಾನ್‌ ಖಾನ್‌ ಅವರ ಅತ್ಮೀಯರಾಗಿರುವ ಶಹಬಾಸ್‌ ಗಿಲ್‌ ದೇಶದ್ರೋಹದ ಆಪಾದನೆ ಎದುರಿಸುತ್ತಿದ್ದಾರೆ. ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪವಿದೆ. ಇದನ್ನು ಪ್ರಶ್ನಿಸಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ಆಗಸ್ಟ್‌ ೨೦ರ ಶನಿವಾರ ಇಸ್ಲಾಮಾಬಾದ್‌ನಲ್ಲಿ ಒಂದು ಪ್ರತಿಭಟನಾ ರ‍್ಯಾಲಿ ನಡೆದಿತ್ತು. ಈ ಸಂದರ್ಭದಲ್ಲಿ ಭಾಷಣ ಮಾಡಿದ ಇಮ್ರಾನ್‌ ಖಾನ್‌ ಅವರು ಇಸ್ಲಾಮಾಬಾದ್‌ನ ಪೊಲೀಸ್‌ ಮುಖ್ಯಸ್ಥ ಮತ್ತು ಮಹಿಳಾ ನ್ಯಾಯಾಧೀಶರೊಬ್ಬರಿಗೆ ಬೆದರಿಕೆ ಹಾಕಿದ್ದರು. ಇದಕ್ಕಾಗಿ ಅವರ ಮೇಲೆ ಭಯೋತ್ಪಾದನಾ ನಿಗ್ರಹ ಕಾಯಿದೆಯ ಸೆಕ್ಷನ್‌ ೭ರ ಅಡಿಯಲ್ಲಿ ಪ್ರಕಋಣ ದಾಖಲಿಸಲಾಗಿದೆ.
– ಇಮ್ರಾನ್‌ ಖಾನ್‌ ಅವರು ಉನ್ನತ ಪೊಲೀಸ್‌ ಅಧಿಕಾರಿ ಮತ್ತು ಗೌರವಾನ್ವಿತ ಮಹಿಳಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಿಗೆ ಬೆದರಿಕೆ ಹಾಕಿರುವುದು ಅವರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.
– ಇಮ್ರಾನ್‌ ಖಾನ್‌ ಅವರು ಶನಿವಾರ ಮಾಡಿದ ದ್ವೇಷ ಭಾಷಣವು ಪೊಲೀಸರು, ನ್ಯಾಯಾಧೀಶರು ಮಾತ್ರವಲ್ಲ ರಾಷ್ಟ್ರಾದ್ಯಂತ ಭಯದ ವಾತಾವರಣಕ್ಕೆ ಕಾರಣವಾಗಿದೆ.
– ಇಮ್ರಾನ್‌ ಖಾನ್‌ ಅವರನ್ನು ಬಂಧಿಸಬಹುದು ಎಂಬ ನಿರೀಕ್ಷೆ ಇದ್ದು, ಪಿಟಿಐ ಕಾರ್ಯಕರ್ತರೆಲ್ಲರೂ ಬೀದಿಗೆ ಇಳಿಯಬೇಕು ಎಂದು ಸೂಚನೆ ನೀಡಲಾಗಿದೆ. ಹೀಗಾಗಿ ಬನಿ ಗಾಲಾ ಪ್ರದೇಶದಲ್ಲಿರುವ ಇಮ್ರಾನ್‌ ಖಾನ್‌ ಮನೆಗೆ ಅಭಿಮಾನಿಗಳು, ಅನುಯಾಯಿಗಳು ಧಾವಿಸಿ ಬಂದಿದ್ದಾರೆ.
– ಒಂದೊಮ್ಮೆ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಿದರೆ ಇಡೀ ಇಸ್ಲಾಮಾಬಾದ್‌ನ್ನು ನಾವು ನಮ್ಮ ವಶಕ್ಕೆ ತೆಗೆದುಕೊಳ್ಳಲಿದ್ದೇವೆ. ಹೀಗಾಗಿ ಪೊಲೀಸರು ಈ ರಾಜಕೀಯ ಯುದ್ಧದಲ್ಲಿ ಮೂಗು ತೂರಿಸದೆ ಇದ್ದರೆ ಒಳ್ಳೆಯದು ಎಂಬ ಎಚ್ಚರಿಕೆಯನ್ನು ಪಿಟಿಐ ನಾಯಕ ಅಲಿ ಅಮೀನ್‌ ಗಂಡಾಪುರ್‌ ನೀಡಿದ್ದಾರೆ.
– ಇದೆಲ್ಲದರ ನಡುವೆಯೇ, ಬಂಧನ ಭೀತಿ ಇದ್ದರೂ ಇಮ್ರಾನ್‌ ಖಾನ್‌ ಅವರು ಭಾನುವಾರ ರಾತ್ರಿ ಲಿಯಾಕತ್‌ ಭಾಗ್‌ ಮೈದಾನದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಮಧ್ಯೆ, ಸರಕಾರ ದೇಶದಲ್ಲಿ ಯೂಟ್ಯೂಬ್‌ನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿದೆ. ಜನರು ತನ್ನ ಮಾತು ಕೇಳಲಾಗದಂತೆ ಮಾಡಲಾಗಿದೆ ಎಂದು ಇಮ್ರಾನ್‌ ಆರೋಪಿಸಿದ್ದಾರೆ.

Exit mobile version