ಕಠ್ಮಂಡು: ನೇಪಾಳದ ನೂತನ ಪ್ರಧಾನಿಯಾಗಿ ‘ಪ್ರಚಂಡ’ ಎಂದೇ ಖ್ಯಾತಿಯಾಗಿರುವ ಪುಷ್ಪ ಕಮಲ್ ದಹಾಲ್ (Pushpa Kamal Dahal) ಅವರು ನೇಮಕಗೊಂಡಿದ್ದಾರೆ. ಪ್ರಚಂಡ ಅವರನ್ನು ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ಅವರು ನೇಮಕ ಮಾಡಿದ್ದಾರೆ ಎಂದು ನೇಪಾಳ ಅಧ್ಯಕ್ಷರ ಕಚೇರಿ ತಿಳಿಸಿದೆ.
“ನೇಪಾಳ ಕಮ್ಯುನಿಸ್ಟ್ ಪಕ್ಷದ (ಮಾವೋವಾದಿ ಕೇಂದ್ರಿತ) ಪುಷ್ಪ ಕಮಲ್ ದಹಾಲ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರು ಸೋಮವಾರ (ಡಿಸೆಂಬರ್ 26) ಸಂಜೆ 4 ಗಂಟೆಯೊಳಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ” ಎಂದು ಮಾಹಿತಿ ನೀಡಿದೆ. ಪ್ರಚಂಡ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಂತಾಗಿದೆ. ಇದಕ್ಕೂ ಮೊದಲು ಅವರು 2008-09, 2016-17ರಲ್ಲಿ ಪ್ರಧಾನಿಯಾಗಿದ್ದರು.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪಕ್ಷಗಳ ಬೆಂಬಲದೊಂದಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಯಾವುದೇ ಸದಸ್ಯರು ಪ್ರಧಾನಿ ಹುದ್ದೆಗೆ ಹಕ್ಕು ಸಲ್ಲಿಸಲು ಅಧ್ಯಕ್ಷೆ ವಿದ್ಯಾ ದೇವಿ ಅವರು ಡಿಸೆಂಬರ್ 25ರ ಸಂಜೆ 5 ಗಂಟೆಯ ಗಡುವು ನೀಡಿದ್ದರು. ಅದರಂತೆ, ಪ್ರಚಂಡ ಅವರು ಆರು ಪಕ್ಷಗಳ ಬೆಂಬಲದೊಂದಿಗೆ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇವರು ಎರಡೂವರೆ ವರ್ಷ ಅಧಿಕಾರದಲ್ಲಿರಲಿದ್ದಾರೆ ಎಂದು ತಿಳಿದುಬಂದಿದೆ.
78 ಸದಸ್ಯರನ್ನು ಒಳಗೊಂಡ ಸಿಪಿಎನ್-ಯುಎಂಎಲ್, 32 ಸದಸ್ಯರ ಬಲದ ಮಾವೋಯಿಸ್ಟ್ ಸೆಂಟರ್, 20 ಸದಸ್ಯರನ್ನು ಹೊಂದಿರುವ ರಾಷ್ಟ್ರೀಯ ಸ್ವತಂತ್ರ ಪಾರ್ಟಿ, 14 ಸದಸ್ಯರ ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ, 12 ಸದಸ್ಯರ ಜನತಾ ಸಮಾಜವಾದಿ ಪಾರ್ಟಿ ಹಾಗೂ 6 ಸಂಸದರನ್ನು ಹೊಂದಿರುವ ಜನಮತ ಪಾರ್ಟಿಯು ಪ್ರಚಂಡ ಅವರಿಗೆ ಬೆಂಬಲ ಸೂಚಿಸಿವೆ. 250 ಸದಸ್ಯ ಬಲದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ದಹಾಲ್ ಅವರು 169 ಸದಸ್ಯರ ಬೆಂಬಲ ಹೊಂದಿದ್ದಾರೆ. ಕೆ.ಪಿ. ಶರ್ಮಾ ಒಲಿ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ 2021ರಲ್ಲಿ ನೇಪಾಳ ಸಂಸತ್‌ಅನ್ನು ವಿಸರ್ಜಿಸಲಾಗಿತ್ತು.
ಇದನ್ನೂ ಓದಿ | Charles Sobhraj | ಸೀರಿಯಲ್ ಕಿಲ್ಲರ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂ ಆದೇಶ, ಭಾರತದ ಜತೆ ಈತನ ನಂಟೇನು?