Site icon Vistara News

Elon Musk | ಟ್ರಂಪ್ ಖಾತೆ ಮತ್ತೆ ಸಕ್ರಿಯಗೊಳಿಸಬೇಕೇ? ಮಸ್ಕ್ ಸಮೀಕ್ಷೆಗೆ ಶೇ.52 ಮಂದಿ ಓಕೆ!

Elon Musk and Donald Trump

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗುತ್ತಿದೆಯೇ? ಇಂಥದೊಂದು ಅನುಮಾನಗಳು ಬರಲು ಕಾರಣವಿದೆ. ಟ್ವಿಟರ್‌ನ ನೂತನ ಒಡೆಯ ಎಲಾನ್ ಮಸ್ಕ್ (Elon Musk) ಅವರು, ಪೋಲ್ ಆರಂಭಿಸಿದ್ದು, ಈಗಾಗಲೇ 84 ಲಕ್ಷ ಜನರು ವೋಟ್ ಮಾಡಿದ್ದಾರೆ. ಈ ಪೈಕಿ ಶೇ.52 ಜನರು ಟ್ರಂಪ್ ಮೇಲೆ ಟ್ವಿಟರ್ ಹೇರಿರುವ ಬ್ಯಾನ್ ಹಿಂಪಡೆದುಕೊಳ್ಳಬೇಕೆಂದು ಹೇಳಿದ್ದಾರೆ. ಈ ಪೋಲ್ ಮುಗಿಯಲು ಇನ್ನೂ 14 ಗಂಟೆ ಬಾಕಿ ಇದೆ. ಅಮೆರಿಕದ ಕ್ಯಾಪಿಟಲ್ ಹಿಲ್ ಮೇಲೆ ದಾಳಿಗೆ ಪ್ರಚೋದನೆ ನೀಡಿದ ಕಾರಣಕ್ಕೆ ಟ್ವಿಟರ್, 2021ರಲ್ಲಿ ಟ್ರಂಪ್ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿತ್ತು.

ಟ್ವಿಟರ್ ಬೆನ್ನಲ್ಲೇ ಇತರ ಸಾಮಾಜಿಕ ಮಾಧ್ಯಮಗಳು ಕೂಡ ಡೋನಾಲ್ಡ್ ಟ್ರಂಪ್ ಅವರ ಖಾತೆಯನ್ನು ನಿರ್ಬಂಧಿಸಿದ್ದವು. ಸದಾ ವಿವಾದಲ್ಲಿ ಮುಳುಗುವ ಭಾರತದ ನಟಿ ಕಂಗನಾ ರಣಾವತ್ ಅವರ ಖಾತೆಯನ್ನು ಟ್ವಿಟರ್ ನಿಷೇಧಿಸಿದೆ. ಒಂದೊಮ್ಮೆ, ಡೋನಾಲ್ಡ್ ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ಮತ್ತೆ ಸಕ್ರಿಯಗೊಳಿಸಿದರೆ, ಕಂಗನಾ ಖಾತೆ ಕೂಡ ಸಕ್ರಿಯಗೊಳ್ಳುವ ಸಾಧ್ಯತೆಗಳು ಹೆಚ್ಚಾಗಲಿವೆ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಟ್ವಿಟರ್‌ನಲ್ಲಿ ಮತ್ತೆ 1,200 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಂಪನಿಯ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದೆ. ಕಂಪನಿಯಲ್ಲಿ ಕೆಲಸ ಮಾಡಲು ಪೂರಕ ವಾತಾವರಣ ಇಲ್ಲ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ. ನ್ಯೂಯಾರ್ಕ್‌ ಟೈಮ್ಸ್‌ ಪ್ರಕಾರ, ಟ್ವಿಟರ್‌ನ ಪ್ರಮುಖ ತಂಡಗಳೇ ಕಂಪನಿಯಿಂದ ನಿರ್ಗಮಿಸಿವೆ.

ಈ ನಡವೆ ಎಲಾನ್‌ ಮಸ್ಕ್‌, ಉದ್ಯೋಗಿಗಳಗೆ ಕಳಿಸಿರುವ ಇ-ಮೇಲ್‌ನಲ್ಲಿ, ಯಾರಾದರೂ ನಿಜವಾಗಿಯೂ ಟ್ವಿಟರ್‌ನ ಸಾಫ್ಟ್‌ವೇರ್‌ ರಚಿಸುವವರು ಹಾಗೂ ಕಳೆದ ಆರು ತಿಂಗಳುಗಳಲ್ಲಿ ಈ ಬಗ್ಗೆ ಬದ್ಧತೆಯಿಂದ ಕೆಲಸ ಮಾಡಿದವರು ಕೂಡಲೇ ರಿಪೋರ್ಟ್‌ ಮಾಡಬೇಕು. ಕೋಡ್‌ನ ಲೈನ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತರಬೇಕು ಎಂದು ಸೂಚಿಸಿದ್ದಾರೆ. ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನ 50% ಉದ್ಯೋಗಿಗಳನ್ನು (ಸುಮಾರು 3,500) ಉದ್ಯೋಗಿಗಳನ್ನು ಈಗಾಗಲೇ ವಜಾಗೊಳಿಸಿದ್ದಾರೆ. ಅನೇಕ ಹಿರಿಯ ಅಧಿಕಾರಿಗಳು ರಾಜೀನಾಮೆ ಕೊಟ್ಟಿದ್ದಾರೆ.

ಇದನ್ನೂ ಓದಿ | Koo App | ಬನ್ನಿ ನಮ್ಜೊತೆ ಕೆಲಸ ಮಾಡಿ, ಟ್ವಿಟರ್‌ನ ಮಾಜಿ ಉದ್ಯೋಗಿಗಳಿಗೆ ಕೂ ಆ್ಯಪ್ ಆಹ್ವಾನ

Exit mobile version