ವಾಷಿಂಗ್ಟನ್: ೨೦೨೪ರಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ನಾನೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಇದೇ ಪಕ್ಷದ, ಭಾರತ ಮೂಲದ ನಿಕ್ಕಿ ಹ್ಯಾಲೆ (Nikki Haley) ಅವರು ಡೊನಾಲ್ಡ್ ಟ್ರಂಪ್ ಅವರಿಗೇ ಸವಾಲು ಹಾಕಿದ್ದಾರೆ. “ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ನಾನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ” ಎಂದು ನಿಕ್ಕಿ ಹ್ಯಾಲೆ ಘೋಷಿಸಿಕೊಂಡಿದ್ದಾರೆ. ಇದರಿಂದಾಗಿ, ೨೦೨೪ರಲ್ಲಿ ಟ್ರಂಪ್ ಅವರಿಗೆ ಮೊದಲ ಸವಾಲು ನಿಕ್ಕಿ ಹ್ಯಾಲೆಯೇ ಎಂದು ವಿಶ್ಲೇಷಿಸಲಾಗುತ್ತಿದೆ.
ನಿಕ್ಕಿ ಹ್ಯಾಲೆ ಅವರು ವಿಡಿಯೊ ಸಂದೇಶವೊಂದನ್ನು ರವಾನಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಕುರಿತು ನಿರ್ಧಾರ ಪ್ರಕಟಿಸಿದ್ದಾರೆ. “ನಾನು ನಿಕ್ಕಿ ಹ್ಯಾಲೆ. ಮುಂಬರುವ ಚುನಾವಣೆಯಲ್ಲಿ ನಾನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಅಮೆರಿಕದ ಶಕ್ತಿ ದ್ವಿಗುಣಗೊಳಿಸಲು, ಗಡಿ ಸುರಕ್ಷತೆ, ನಮ್ಮ ಹೆಮ್ಮೆ ಹೆಚ್ಚಿಸಿಕೊಳ್ಳಲು ಹೊಸ ಪೀಳಿಗೆಯ ನಾಯತ್ವದ ಅಗತ್ಯವಿದೆ. ಹಾಗಾಗಿ ನಾನು ಸ್ಪರ್ಧಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಸೌತ್ ಕ್ಯಾರೋಲಿನಾ ರಾಜ್ಯಪಾಲೆಯಾಗಿ, ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿ ನಿಕ್ಕಿ ಹ್ಯಾಲೆ ಕಾರ್ಯನಿರ್ವಹಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರೇ ನಿಕ್ಕಿ ಹ್ಯಾಲೆ ಅವರನ್ನು ರಾಯಭಾರಿಯಾಗಿ ನೇಮಿಸಿದ್ದರು. ಆದರೆ, ಕೆಲ ವರ್ಷದಿಂದ ಇಬ್ಬರ ಮಧ್ಯೆ ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ನಿಕ್ಕಿ ಹ್ಯಾಲೆ ಅವರು ವಿಶೇಷ ಘೋಷಣೆ ಮಾಡುತ್ತೇನೆ ಎಂದು ಹೇಳುವ ಮೂಲಕ ಸ್ಪರ್ಧೆಯ ಸುಳಿವು ನೀಡಿದ್ದರು.
ನಿಕ್ಕಿ ಹ್ಯಾಲೆ ಭಾರತ ಮೂಲದವರು
ನಿಕ್ಕಿ ಹ್ಯಾಲೆ ಅವರು ಭಾರತ ಮೂಲದವರಾಗಿದ್ದಾರೆ. ನಿಕ್ಕಿ ಹ್ಯಾಲೆ ತಂದೆ ಅಜಿತ್ ಸಿಂಗ್ ರಾಂಧವ ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ಅವರ ತಾಯಿ ರಾಜ್ ಕೌರ್ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿದ್ದಾರೆ. ನಿಕ್ಕಿ ಹ್ಯಾಲೆ ತಂದೆ-ತಾಯಿಯು ಅಮೆರಿಕಕ್ಕೆ ವಲಸೆ ಹೋಗಿ, ಸೌತ್ ಕ್ಯಾರೋಲಿನಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಂದಹಾಗೆ, ನಿಕ್ಕಿ ಹ್ಯಾಲೆ ಅವರ ಮೊದಲ ಹೆಸರು ನಿಮ್ರತಾ ರಾಂಧವ. ಈಗಾಗಲೇ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Donald Trump Company | ತೆರಿಗೆ ವಂಚನೆ ಕೇಸ್, ಡೊನಾಲ್ಡ್ ಟ್ರಂಪ್ ಕಂಪನಿಗೆ 130 ಕೋಟಿ ರೂ. ದಂಡ