ರೋಮ್: ಇಟಲಿಯ ಮೊಟ್ಟ ಮೊದಲ ಮಹಿಳಾ ಪ್ರಧಾನಿಯಾಗಿ ಜಾರ್ಜಿಯಾ ಮೆಲೊನಿ (Giorgia Meloni) ಅವರು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎರಡನೇ ವಿಶ್ವ ಯುದ್ಧದ ಬಳಿಕ ಇಟಲಿಯಲ್ಲಿ ಬಲಪಂಥೀಯ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ರೋಮ್‌ನಲ್ಲಿರುವ ಕ್ವಿರಿನೇಲ್ ಪ್ಯಾಲೇಸ್‌ನಲ್ಲಿ ನೂತನ ಪ್ರಧಾನಿಗೆ ಅಧ್ಯಕ್ಷ ಸರ್ಗಿಯೊ ಮಟ್ಟೆರಾಲಾ ಅವರು ಪ್ರಮಾಣ ವಚನ ಬೋಧಿಸಿದರು.
ಕೋವಿಡ್ ಬಿಕ್ಕಟ್ಟಿನ ಬಳಿಕ ಇಟಲಿಯ ಆರ್ಥಿಕತೆ ಕುಸಿತಕ್ಕೀಡಾಗಿದ್ದು, ಆರ್ಥಿಕ ಹಿಂಜರಿತದ ಭೀತಿ ಉಂಟಾಗಿದೆ. ದೇಶದ ಸಾಲದ ಹೊರೆಯೂ ಹೆಚ್ಚಿದೆ. ಹೀಗಾಗಿ ಸಂಕಷ್ಟದ ಸಂದರ್ಭದಲ್ಲಿ ಜಾರ್ಜಿಯಾ ಮೆಲೊನಿ ಪ್ರಧಾನಿಯಾಗಿದ್ದಾರೆ.
ಪತ್ರಕರ್ತೆಯಾಗಿದ್ದ ಜಾರ್ಜಿಯಾ ಮೆಲೊನಿ: ಇಟಲಿಯ ರಾಜಕಾರಣಿ ಜಾರ್ಜಿಯಾ ಮೆಲೊನಿ (45) ಅವರು ಪತ್ರಕರ್ತೆ ಆಗಿಯೂ ಸೇವೆ ಸಲ್ಲಿಸಿದ್ದರು. 2014ರಿಂದ ಇಟಲಿಯ ಬಲಪಂಥೀಯ ಪಕ್ಷವಾದ ಬ್ರದರ್ಸ್ ಆಫ್ ಇಟಲಿಯ ಸಾರಥ್ಯ ವಹಿಸಿದ್ದರು. ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಇದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇದೀಗ ಬ್ರದರ್ಸ್ ಆಫ್ ಇಟಲಿ ಪಕ್ಷದ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.