ನವದೆಹಲಿ: ಶಾಲೆಯಲ್ಲಿ ಕುಳಿತರೂ ಸಂಜೆ ಯಾವಾಗ ಆಗುತ್ತದೆಯೋ, ಅದರಲ್ಲೂ ಸಂಜೆ ೫.೩೦ ಆಗುತ್ತದೆಯೋ, ಯಾವಾಗ ಸ್ಕೂಬಿ-ಡೂ ನೋಡುತ್ತೇವೆಯೋ ಅನಿಸುತ್ತಿತ್ತು. ಟಾಮ್ ಆ್ಯಂಡ್ ಜೆರಿಯ ಸಾಹಸಗಳು ಯಾವಾಗಲೂ ಕಾಡುತ್ತಿದ್ದವು, ಗೆಳೆಯರ ಹತ್ತಿರ ಹೇಳಿಕೊಂಡು ನಗುತ್ತಿದ್ದೆವು… ೧೯೯೦ರ ದಶಕದಲ್ಲಿ ಮಕ್ಕಳಿಗೆ ಕಾರ್ಟೂನ್ ನೆಟ್‌ವರ್ಕ್ ಎಂದರೆ ಈಗಲೂ ಇಂತಹ ವಿನೀತ ಭಾವ ಮೂಡಿಸುತ್ತದೆ. ಕಾರ್ಟೂನ್ ನೆಟ್‌ವರ್ಕ್‌ನ (Cartoon Network) ಒಂದೊಂದು ಪಾತ್ರಗಳೂ ಮನಸ್ಸಿನ ಪರದೆಯ ಮೇಲೆ ಸ್ಲೈಡ್ ಶೋ ನಡೆಸುತ್ತವೆ.
ಹೀಗೆ, ವಿವಿಧ ಪಾತ್ರಗಳ ಮೂಲಕ ಒಂದಿಡೀ ಪೀಳಿಗೆಯ ಬಾಲ್ಯವನ್ನು ಸುಮಧುರಗೊಳಿಸಿದ ಕಾರ್ಟೂನ್ ನೆಟ್‌ವರ್ಕ್‌ನ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಅಪ್ಪಳಿಸಿದೆ. ಹೌದು, ಕಾರ್ಟೂನ್ ನೆಟ್‌ವರ್ಕ್ ಹಾಗೂ ವಾರ್ನರ್ ಬ್ರೋಸ್ ಕಂಪನಿಗಳು ವಿಲೀನಗೊಳ್ಳುತ್ತಿವೆ. ವಾರ್ನರ್ ಬ್ರೋಸ್ ಕಂಪನಿಯ ನೀತಿ ನಿರೂಪಣೆಗಳ ಕುರಿತು ಜನರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹಾಗಾಗಿ, ಕಾರ್ಟೂನ್‌ಗಳ ವೈಭವ ಇನ್ನು ಮುಂದೆ ಮರೀಚಿಕೆ ಎಂದೇ ಹೇಳಲಾಗುತ್ತಿದೆ.
ಇದಕ್ಕೆ ನಿದರ್ಶನ ಎಂಬಂತೆ, ವಾರ್ನರ್ ಬ್ರೋಸ್ ಕಂಪನಿಯು ಈಗಾಗಲೇ ಕಾರ್ಟೂನ್ ನೆಟ್‌ವರ್ಕ್ ಕಂಪನಿಯ ಶೇ.೨೬ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇನ್ನುಮುಂದೆ ಅಂತಹ ಕಾರ್ಟೂನ್ ಸರಣಿಗಳು ಕನಸಿನ ಮಾತು ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಕಳೆದ ೩೦ ವರ್ಷದಿಂದ ಚಿಣ್ಣರ ಬಾಲ್ಯವನ್ನು ಸುಮಧುರಗೊಳಿಸಿದ ಕಾರ್ಟೂನ್ ನೆಟ್‌ವರ್ಕ್ ವಿಲೀನದ ಕುರಿತು ಜಾಲತಾಣಗಳಲ್ಲಿ ಬೇಸರ ವ್ಯಕ್ತವಾಗುತ್ತಿದೆ. ಅಭಿಮಾನಿಗಳಂತೂ RIP Cartoon Network ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟ್ವಿಟರ್‌ನಲ್ಲಿ ಟ್ರೆಂಡ್ ಸಹ ಆಗಿದೆ.
ಇದನ್ನೂ ಓದಿ | Sunday Read | ಸಾನಿಚರ್ ಮೌಗ್ಲಿಯಾದನೇ? ಇದು ʼಜಂಗಲ್ ಬುಕ್ʼ ಹಿಂದಿನ ಸ್ಫೂರ್ತಿ ಕಥೆ!