ಲಂಡನ್: ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ನಂತರ ಬ್ರಿಟನ್‌ನ ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅರ್ಹರನ್ನು ಆಯ್ಕೆ ಮಾಡಲು ಕನ್ಸರ್ವೇಟಿವ್ ಪಾರ್ಟಿಯಲ್ಲಿ ನಡೆಯುತ್ತಿರುವ ಚುನಾವಣೆಯ ಅಂತಿಮ ಸುತ್ತಿನಲ್ಲಿ ಹಣಕಾಸು ಸಚಿವ, ಭಾರತೀಯ ಮೂಲದ ರಿಷಿ ಸುನಕ್ ಹಿನ್ನಡೆ ಅನುಭವಿಸುತ್ತಿದ್ದಾರೆ. ಈ ವಿಷಯವನ್ನು ಅವರೇ ಒಪ್ಪಿಕೊಂಡಿದ್ದು, ಹೋರಾಟವನ್ನು ಮುಂದುವರಿಸುವುದಾಗಿ ಪ್ರಕಟಿಸಿದ್ದಾರೆ.
ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಸುನಕ್ ಅವರ ನಿಲುವಿಗೆ ಬೆಂಬಲ ವ್ಯಕ್ತವಾಗುತ್ತಿಲ್ಲ. ಆದರೂ ಪ್ರತಿಯೊಂದು ಮತವನ್ನೂ ಪಡೆಯಲು ತಾವು ಪ್ರಯತ್ನಿಸುವುದಾಗಿ ಅವರು ಹೇಳಿದ್ದಾರೆ. ಈಗಾಗಲೇ ಮೊದಲ ಸುತ್ತಿನ ಪ್ರಚಾರ ಸಭೆಯನ್ನು ನಡೆಸಿರುವ ಅವರಿಗೆ ಸೋಲುವ ಭೀತಿ ಎದುರಾಗಿದೆ. ಟಿವಿ ಕಾರ್ಯಕ್ರಮಗಳಲ್ಲಿ ಸ್ವಪಕ್ಷೀಯರೇ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಅಂತಿಮ ಸುತ್ತಿನಲ್ಲಿ ಕಣದಲ್ಲಿರುವ ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರುಸ್ ಅವರ ತೆರಿಗೆಗೆ ಸಂಬಂಧಿಸಿದ ನಿಲುವುಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಕೂಡಲೇ ತೆರಿಗೆಗಳನ್ನು ಕಡಿತ ಮಾಡುವುದಾಗಿ ಹಾಗೂ ದೇಶದ ತೆರಿಗೆ ಪದ್ಧತಿಯನ್ನು ಸಂಪೂರ್ಣವಾಗಿ ಮರುಪರಿಶೀಲನೆಗೊಳ ಪಡಿಸುವುದಾಗಿ ಅವರು ಪ್ರಕಟಿಸಿದ್ದಾರೆ. ಈ ನಿಲುವೇ ಅವರನ್ನು ರೇಸ್‌ನಲ್ಲಿ ಮುಂದೆ ಹೋಗುವಂತೆ ಮಾಡಿದೆ. ಬೋರಿಸ್ ಜಾನ್ಸನ್ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಸುನಕ್ ತೆರಿಗೆ ಕಡಿತ ಮಾಡಲು ನಿರಾಕರಿಸಿದ್ದಾರೆ.
ಈ ನಡುವೆ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಕೂಡ ಲಿಜ್ ಟ್ರುಸ್‌ಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷದಲ್ಲಿನ ನಾಯಕರ ಬೆಂಬಲ ಪಡೆಯುವಲ್ಲಿಯೂ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಸುನಕ್ ವಿಫಲರಾಗುತ್ತಿದ್ದು, ಇದು ಅವರಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ.
ಸೆಪ್ಟೆಂಬರ್ ೫ಕ್ಕೆ ನೂತನ ಪ್ರಧಾನಿ ಘೋಷಣೆ: ಸೆಪ್ಟೆಂಬರ್ ೨ಕ್ಕೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದೆ. ಸೆಪ್ಟೆಂಬರ್ ೫ರಂದು ನೂತನ ಪ್ರಧಾನಿಯ ಯಾರು ಎಂಬುದು ಘೋಷಣೆಯಾಗಲಿದೆ. ಒಂದು ವೇಳೆ ರಿಷಿ ಸುನಕ್ ಗೆದ್ದರೆ, ಭಾರತೀಯ ಮೂಲದ ಬ್ರಿಟನ್ ನಾಗರಿಕರೊಬ್ಬರು ಮೊದಲ ಬಾರಿಗೆ ಬ್ರಿಟನ್ ಪ್ರಧಾನಿ ಹುದ್ದೆಗೆ ಏರಿದ ಇತಿಹಾಸ ಸೃಷ್ಟಿಯಾಗಲಿದೆ. ಹೀಗಾಗಿ ಫಲಿತಾಂಶ ಭಾರತದಲ್ಲೂ ಕುತೂಹಲ ಮೂಡಿಸಿದೆ.
ಇದನ್ನೂ ಓದಿ| ವಿಸ್ತಾರ Explainer | ಬ್ರಿಟನ್ ಪ್ರಧಾನಿ ಆಯ್ಕೆಗೆ ಮತದಾನದ ಮೇಲೆ ಮತದಾನ! ರಿಷಿ ಸುನಕ್ ಎಲ್ಲಿ?