Site icon Vistara News

ಇನ್ಫಿ ಮೂರ್ತಿ ಅಳಿಯ ಬ್ರಿಟನ್‌ ಪ್ರಧಾನಿ ಆಗೋಕೆ ಪತ್ನಿಯದೇ ಸಮಸ್ಯೆ!

rishi sunak

ಲಂಡನ್ :‌ ತೀರಾ ಇತ್ತೀಚಿನವರೆಗೂ ರಿಷಿ ಸುನಕ್‌ (Rishi Sunak) “ಬ್ರಿಟನ್‌ನ ಮುಂದಿನ ಪ್ರಧಾನ ಮಂತ್ರಿʼ ಎಂದೇ ಅಂತಾರಾಷ್ಟ್ರೀಯ ಮೀಡಿಯಾಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಆದರೆ ಸದ್ಯ ಅದಕ್ಕೀಗ ಅವರ ಪತ್ನಿಯ ತೆರಿಗೆ ಪ್ರಕರಣವೊಂದು ತೊಡಕಾಗಿದೆ.

ಈ ರಿಷಿ ಸುನಕ್‌ ಬ್ರಿಟನ್‌ನ (UK) ಸದ್ಯದ ವಿತ್ತ ಸಚಿವ ಹಾಗೂ ಇನ್‌ಫೋಸಿಸ್‌ (Infosys) ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ (Narayan Murthy) ಅವರ ಅಳಿಯ. ಇನ್ಫಿ ಮೂರ್ತಿ ಅವರ ಮಗಳು ಅಕ್ಷತಾ (Akshata Murthy) ಅವರನ್ನು ಮದುವೆಯಾಗಿ ಬ್ರಿಟನ್‌ನಲ್ಲಿ ನೆಲೆಸಿ, ರಾಜಕೀಯದಲ್ಲಿ ಹಂತ ಹಂತವಾಗಿ ಮೇಲೇರಿ, ವಿತ್ತ ಸಚಿವ ಸ್ಥಾನದವರೆಗೆ ಬಂದು ನಿಂತಿದ್ದಾರೆ ರಿಷಿ. ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Johnson) ಕೊರೊನಾದ ಅಪಕ್ವ ನಿರ್ವಹಣೆ ಸೇರಿದಂತೆ ಅನೇಕ ವಿವಾದಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡ ಬಳಿಕ, ರಿಷಿ ಸುನಕ್‌ ಅವರು ಜಾನ್ಸನ್‌ನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿತ್ತು. ಅಷ್ಟೇ ತೀವ್ರವಾಗಿ ಅವರ ಜನಪ್ರಿಯತೆ ಕೂಡ ಮೇಲೇರಿತ್ತು.

ಆದರೆ ಕಳೆದೆರಡು ತಿಂಗಳುಗಳಲ್ಲಿ ಅವರ ಜನಪ್ರಿಯತೆಯ ಗ್ರಾಫ್‌ ಅಷ್ಟೇ ವೇಗವಾಗಿ ಇಳಿಯುತ್ತಿದೆ. ಇದಕ್ಕಿರುವ ಕಾರಣಗಳಲ್ಲಿ ಪ್ರಮುಖವಾಗಿರುವುದು ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ಪ್ರಕರಣ.


ಏನಿದು ಪ್ರಕರಣ?
ಅಕ್ಷತಾ ಅವರು ಇಂಗ್ಲೆಂಡ್‌ ಸರಕಾರಕ್ಕೆ ಸಲ್ಲಿಸಬೇಕಾದ 20 ದಶಲಕ್ಷ ಪೌಂಡ್‌ (ಸುಮಾರು 197 ಕೋಟಿ ರೂಪಾಯಿ) ತೆರಿಗೆಯನ್ನು ತಪ್ಪಿಸಿದ್ದಾರೆ ಎಂಬುದು ಅವರ ಮೇಲಿರುವ ಆರೋಪ. ಅದು ಹೇಗೆ? ಅಕ್ಷತಾ ಅವರು ಬೆಂಗಳೂರು ಮೂಲದ ಇನ್ಫೋಸಿಸ್‌ ಕಂಪನಿಯಲ್ಲಿ 0.91% ಷೇರುಗಳನ್ನು ಹೊಂದಿದ್ದಾರೆ. ಪ್ರಸ್ತುತ ಅವುಗಳ ಮೌಲ್ಯ ಸುಮಾರು 100 ಕೋಟಿ ಡಾಲರ್.‌ ಇದರಿಂದಲೇ ಅವರು ವರ್ಷಕ್ಕೆ ₹ 11.56 ಕೋಟಿಗಳಷ್ಟು ಡಿವಿಡೆಂಡ್‌ ಗಳಿಸುತ್ತಾರೆ. ಅಕ್ಷತಾ ಅವರು ಹೊಂದಿರುವ ಎಲ್ಲ ಸ್ಥಿರ ಚರ ಆಸ್ತಿ ಮೌಲ್ಯ ಸುಮಾರು ₹ 6,834 ಕೋಟಿ ಆಗಬಹುದು ಎಂಬ ಅಂದಾಜು. ಅಂದರೆ ಅವರು ಬ್ರಿಟನ್‌ ರಾಣಿಗಿಂತಲೂ ಶ್ರೀಮಂತೆ!

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತದಿಂದ 76 ಸಾವಿರ ಟನ್ ಇಂಧನ ನೆರವು

ಆದರೆ ತಮ್ಮ ಆದಾಯಕ್ಕೆ ತಕ್ಕಂತೆ ಅವರು ಬ್ರಿಟನ್‌ನಲ್ಲಿ ತೆರಿಗೆ ಪಾವತಿ ಮಾಡಿಲ್ಲ. ಯಾಕೆಂದರೆ ಅವರು ಬ್ರಿಟನ್‌ನ ಕಾಯಂ ನಿವಾಸಿ (Domicile) ಅಲ್ಲ. ಅವರು ಈಗಲೂ ಭಾರತೀಯ ಪೌರರೇ. ಭಾರತದಲ್ಲೇ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮಾಡಿದ ಅವರು ಇಂದಿಗೂ ಅದನ್ನು ತ್ಯಜಿಸಿ ಬ್ರಿಟನ್‌ನ ಪೌರತ್ವ ಪಡೆಯಲು ಮನಸ್ಸು ಮಾಡಿಲ್ಲ. ದ್ವಿರಾಷ್ಟ್ರ ಪೌರತ್ವವನ್ನು ಭಾರತ ಮಾನ್ಯ ಮಾಡುವುದಿಲ್ಲ.

ಇದುವರೆಗೂ ಅವರು ಇನ್ಫಿಯಿಂದ ಗಳಿಸಿರುವ ಡಿವಿಡೆಂಡ್ ಪ್ರಮಾಣ ಸುಮಾರು ₹ 544 ಕೋಟಿ. ಈ ಲೆಕ್ಕಾಚಾರದಲ್ಲಿ ಅವರು ಸಲ್ಲಿಸಬೇಕಿರುವ ತೆರಿಗೆ ಮೊತ್ತ ₹ 200 ಕೋಟಿ. ಈ ತೆರಿಗೆ ಹಣವನ್ನು ಅವರು ಭಾರತದಲ್ಲಿ ಸಲ್ಲಿಸಿದ್ದಾರಾ, ವಿದೇಶಿ ತೆರಿಗೆ ಸಲ್ಲಿಸಿದ್ದಾರಾ, ಅಥವಾ ತೆರಿಗೆಗಳ್ಳರ ಸ್ವರ್ಗವೆನಿಸಿರುವ ಕೆಲವು ದ್ವೀಪ ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರಾ ಎಂಬುದು ಪ್ರತಿಪಕ್ಷದ ಸದಸ್ಯರ ಪ್ರಶ್ನೆ. ಆದರೆ ಈ ಪ್ರಶ್ನೆಗೆ ಸುನಕ್‌ ಉತ್ತರಿಸಿಲ್ಲ.


Non Domicile ಎಂದರೇನು?
ಬ್ರಿಟನ್‌ನ ಕಾಯಿದೆ ಪ್ರಕಾರ ಅಕ್ಷತಾ ಮೂರ್ತಿ ಅವರು ಅಲ್ಲಿನ non domicile ಪ್ರಜೆ. ಅಂದರೆ ಅವರು ಬ್ರಿಟನ್‌ನಲ್ಲಿ ಗಳಿಸುವ ಆದಾಯಕ್ಕೆ ಅಲ್ಲಿ ತೆರಿಗೆ ಸಲ್ಲಿಸಬೇಕು. ಆದರೆ ದೇಶದಾಚೆಯ ಮೂಲಗಳಿಂದ ಪಡೆದ ಆದಾಯಕ್ಕೆ ಅವರು ಬ್ರಿಟನ್‌ನಲ್ಲೂ, ಆಯಾ ದೇಶದಲ್ಲೂ ತೆರಿಗೆ ಕಟ್ಟಬೇಕಿಲ್ಲ. ಅಂದರೆ ಅಕ್ಷತಾ ತಮ್ಮ ಆದಾಯಕ್ಕೆ ಭಾರತದಲ್ಲೂ, ಬ್ರಿಟನ್‌ನಲ್ಲೂ ಟ್ಯಾಕ್ಸ್‌ ಕಟ್ಟಲು ಬಾಧ್ಯಸ್ಥರಲ್ಲ. ಆದರೆ ಈ non domicile ಸ್ಥಾನಮಾನ ವಿದೇಶಿ ಪ್ರಜೆಯೊಬ್ಬರಿಗೆ ಅದರಷ್ಟಕ್ಕದೇ ದೊರೆಯುವುದಿಲ್ಲ. ಅದನ್ನು ಪಡೆಯಲು ಅವರು ಅರ್ಜಿ ಸಲ್ಲಿಸಬೇಕು. ಅಕ್ಷತಾ ಹಾಗೆ ಅರ್ಜಿ ಸಲ್ಲಿಸಿಲ್ಲ. 15 ವರ್ಷಗಳ ನಂತರ ಈ non domicile ಸ್ಥಾನಮಾನ ರದ್ದಾಗುತ್ತದೆ.

ಅಕ್ಷತಾ ಅವರು ತೆರಿಗೆ ಕಟ್ಟದಿರುವುದೇನೂ ವಂಚನೆ ಅಲ್ಲ, ಕಾನೂನುಬಾಹಿರವೂ ಅಲ್ಲ. ಆದರೆ ಸ್ವತಃ ಗಂಡ ರಿಷಿ ಸುನಕ್‌ ವಿತ್ತ ಸಚಿವರಾಗಿರುವಾಗ, ತೆರಿಗೆ ಕಟ್ಟಬಹುದಾದ ಸ್ಥಿತಿಯಲ್ಲಿದ್ದೂ, ಅದನ್ನು ಕಟ್ಟದೆ ತಪ್ಪಿಸಿರುವುದು ಪತಿ- ಪತ್ನಿಯ ಆಷಾಢಭೂತಿತನ ಎಂಬುದು ಟೀಕಾಕಾರರ ಆರೋಪ.


ರಿಷಿಗೇಕೆ ಅಡ್ಡಿ?
ರಿಷಿ ಸುನಕ್‌ ಗಣ್ಯತೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಇತ್ತೀಚೆಗೆ ರಿಷಿ ಮಿನಿ ಬಜೆಟ್‌ ಮಂಡಿಸಿದ್ದರು. ಆದರೆ ಹಣದುಬ್ಬರದಿಂದ ಶ್ರೀಸಾಮಾನ್ಯರ ಬದುಕು ಕಷ್ಟವಾಗುತ್ತಿರುವಾಗ, ಆ ಹೊರೆಯನ್ನು ಇಳಿಸಲು ಏನನ್ನೂ ರಿಷಿ ಮಾಡಿಲ್ಲ ಎಂಬ ಸಿಟ್ಟಿದೆ. ಉಕ್ರೇನ್‌ ಮೇಲಿನ ಯುದ್ಧಕ್ಕಾಗಿ ರಷ್ಯಾದ ಮೇಲೆ ಹಲವು ವಾಣಿಜ್ಯ ನಿರ್ಬಂಧಗಳನ್ನು ಇಂಗ್ಲೆಂಡ್‌ ವಿಧಿಸಿದೆ. ಆದರೆ ಇನ್‌ಫೋಸಿಸ್‌ ಮಾತ್ರ ರಷ್ಯಾದಲ್ಲಿ ಎಂದಿನಂತೆ ತನ್ನ ವ್ಯವಹಾರ ನಡೆಸುತ್ತಿದೆ. ಇವೆಲ್ಲ ಕಾರಣಗಳು ರಿಷಿಯ ಪ್ರಧಾನಿ ಹಾದಿಯಲ್ಲಿ ಮುಳ್ಳಾಗಿ ಕಾಣಿಸಿಕೊಂಡಿವೆ.

Exit mobile version