Site icon Vistara News

ಬ್ರಿಟನ್‌ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ರಿಷಿ ಸುನಕ್

rishi sunak

ಲಂಡನ್:‌ ಬ್ರಿಟನ್‌ನ ಮುಂದಿನ ಪ್ರಧಾನಿ ಹುದ್ದೆ ಹಾಗೂ ಕನ್ಸರ್ವೇಟಿವ್‌ ಪಕ್ಷದ ಹೊಸ ನಾಯಕನ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣದಲ್ಲಿ ನಿಲ್ಲುವುದಾಗಿ ಮಾಜಿ ಹಣಕಾಸು ಸಚಿವ, ಭಾರತೀಯ ಮೂಲದ ರಿಷಿ ಸುನಕ್‌ ಅವರು ಘೋಷಿಸಿದ್ದಾರೆ.

ಬೋರಿಸ್‌ ಜಾನ್ಸನ್‌ ತಮ್ಮ ಪದವಿ ತ್ಯಜಿಸಿದ ನಂತರ ಬ್ರಿಟನ್‌ನ ಪ್ರಧಾನ ಮಂತ್ರಿಯ ಸ್ಥಾನಕ್ಕೆ ಕೇಳಿಬರುತ್ತಿರುವ ಹೆಸರುಗಳಲ್ಲಿ ರಿಷಿ ಸುನಕ್‌ ಅವರು ಮುಂಚೂಣಿಯಲ್ಲಿದ್ದಾರೆ. ಬೋರಿಸ್‌ ಜಾನ್ಸನ್‌ ಬದಲಿಗೆ ನೂತನ ಪ್ರಧಾನಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಿಷಿ ಸುನಕ್‌ ಅವರಿಗೆ ಹಲವು ಅಭ್ಯರ್ಥಿಗಳ ಪ್ರತಿಸ್ಪರ್ಧೆಯನ್ನೂ ನಿರೀಕ್ಷಿಸಲಾಗಿದೆ.

ಹೊಸ ಪ್ರಧಾನಿಯ ಆಯ್ಕೆಗಾಗಿ ಕನ್ಸರ್ವೇಟಿವ್‌ ಪಕ್ಷದಲ್ಲಿ ಹಲವು ಸುತ್ತಿನ ಮತದಾನ ಪ್ರಕ್ರಿಯೆ ನಡೆಯಲಿದೆ.

ಈಗಾಗಲೇ ರಿಷಿ ಸುನಕ್‌ ಅವರು ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ” ಬ್ರಿಟನ್‌ನ ಉತ್ತಮ ಭವಿಷ್ಯಕ್ಕಾಗಿ ಸರ್ಕಾರದಲ್ಲಿ ಯಾರಾದರೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಉತ್ತಮ ಆಡಳಿತ ನಡೆಸಿಕೊಂಡು ಹೋಗಬೇಕಾಗಿದೆ. ಹೀಗಾಗಿ ನಾನು ಕನ್ಸರ್ವೇಟಿವ್‌ ಪಕ್ಷದ ಮುಂದಿನ ನಾಯಕ ಹಾಗೂ ಪ್ರಧಾನಿಯಾಗಲು ಕಣಕ್ಕೆ ಇಳಿಯುತ್ತಿದ್ದೇನೆʼʼ ಎಂದು ಹೇಳಿದ್ದಾರೆ.

” ವರ್ತಮಾನವನ್ನು ಪ್ರಾಮಾಣಿಕತೆ, ಗಂಭೀರತೆ ಮತ್ತು ದೃಢ ನಿರ್ಧಾರಗಳಿಂದ ಎದುರಿಸಬೇಕಾಗಿದೆ. ದೇಶದ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಇದು ಅನಿವಾರ್ಯʼʼ ಎಂದು ಸುನಕ್‌ ಹೇಳಿದ್ದಾರೆ. ಹಲವು ಸಂಸದರು ಸುನಕ್‌ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

ರಿಷಿ ಸುನಕ್‌ ಅವರು ಬ್ರಿಟನ್‌ ಸಂಜಾತ. ಇವರ ತಂದೆ ತಾಯಿ ಭಾರತೀಯ ಮೂಲದವರು. ರಿಷಿ ಇಂಗ್ಲೆಂಡಿನ ಸೌತಾಂಪ್ಟನ್‌ನಲ್ಲಿ ನೆಲೆಸಿದ್ದ ಪಂಜಾಬ್‌ ಮೂಲದ ಯಶ್ವೀರ್‌ ಮತ್ತು ಉಷಾ ಸುನಕ್‌ ಎಂಬ ದಂಪತಿಗೆ 1980ರಲ್ಲಿ ಜನಿಸಿದವರು. ಇವರ ಅಜ್ಜ ಅಜ್ಜಿ ಪಂಜಾಬ್‌ನಿಂದ ವಲಸೆ ಹೋದವರು. ತಂದೆ ವೈದ್ಯರು.

ವಿದ್ಯಾರ್ಥಿ ದೆಸೆಯಲ್ಲೇ ಇನ್‌ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು ಭೇಟಿಯಾಗಿ, ಪ್ರೇಮಿಸಿ, 2009ರಲ್ಲಿ ರಿಷಿ ಹಾಗೂ ಅಕ್ಷತಾ ಮೂರ್ತಿ ಮದುವೆಯಾದರು. ಅದಕ್ಕೂ ಮುನ್ನ ರಿಷಿ ಅವರು ನಾರಾಯಣಮೂರ್ತಿ ಪಾಲುದಾರರಾಗಿದ್ದ ಇಂಗ್ಲೆಂಡ್‌ನ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿದ್ದರು.

2014ರಲ್ಲಿ ರಿಚ್ಮಂಡ್‌ ಎಂಬಲ್ಲಿಂದ ಕನ್ಸರ್ವೇಟಿಕ್‌ ಪಕ್ಷದಿಂದ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಹಗರಣಗಳಲ್ಲಿ ಸಿಲುಕಿಕೊಂಡ ಬೋರಿಸ್‌ ಜಾನ್ಸನ್‌ ಅವರನ್ನು ಸಮರ್ಥಿಸಿಕೊಂಡು ಬಂದದ್ದರಿಂದ ರಿಷಿ ಅವರ ಜನಪ್ರಿಯತೆ ತುಸು ಇಳಿಯಿತು. ಕೊನೆಗೂ ರಿಷಿ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಬ್ರಿಟನ್‌ ಪ್ರಧಾನಿ: ರಿಷಿ ಸುನಕ್‌ಗೆ ಇನ್ನೊಬ್ಬ ಭಾರತೀಯಳಿಂದಲೇ ಪೈಪೋಟಿ!

Exit mobile version