ಲಂಡನ್: ಭಾರತದ ಸ್ವಾತಂತ್ರ್ಯ ದಿನದಂದು ಬ್ರಿಟಿಷ್ ಪ್ರಧಾನಿ (UK prime minister) ವಿಶಿಷ್ಟ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಮ್ಮ ಹಿಂದೂ ಮೂಲವನ್ನು ಪುನರುಚ್ಚರಿಸಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನಡೆದ ʼರಾಮ್ ಕಥಾʼದಲ್ಲಿ ಭಾಗವಹಿಸಿದ ರಿಷಿ ಸುನಕ್ (Rishi Sunak) ಅವರು “ನಾನು ಇಲ್ಲಿಗೆ ಪ್ರಧಾನಿಯಾಗಿ ಬಂದಿಲ್ಲ, ಹಿಂದೂ ಆಗಿ ಬಂದಿದ್ದೇನೆ” ಎಂದು ಘೋಷಿಸಿದರು.
“ಸ್ವಾತಂತ್ರ್ಯ ದಿನದಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ (Cambridge university) ಮೊರಾರಿ ಬಾಪು ಅವರ ರಾಮ್ ಕಥಾದಲ್ಲಿ ಭಾಗವಹಿಸುತ್ತಿರುವುದು ನಿಜವಾಗಿಯೂ ನನಗೆ ಗೌರವ ಮತ್ತು ಸಂತೋಷದ ಸಂಗತಿ. ನಾನು ಇಂದು ಪ್ರಧಾನ ಮಂತ್ರಿಯಾಗಿ ಅಲ್ಲ, ಆದರೆ ಹಿಂದೂವಾಗಿ ಇಲ್ಲಿದ್ದೇನೆ” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸುನಕ್ ಹೇಳಿದರು.
ಬ್ರಿಟನ್‌ನ ಭಾರತೀಯ ಮೂಲದ ಮೊದಲ ಪ್ರಧಾನಿಯಾಗಿರುವ ರಿಷಿ, ಪಂಜಾಬಿ ಬೇರುಗಳನ್ನು ಹೊಂದಿದ್ದು, ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಸುನಕ್ ಸೌತಾಂಪ್ಟನ್‌ನಲ್ಲಿ ಹುಟ್ಟಿ ಬೆಳೆದವರು. ಆದರೆ ಭಾರತೀಯ ಮೂಲದ ವ್ಯಕ್ತಿ, ಭಾರತದ ಅಳಿಯ ಎಂದೇ ಕರೆದುಕೊಳ್ಳುತ್ತಾರೆ. ಸೌತಾಂಪ್ಟನ್‌ನಲ್ಲಿ ತಮ್ಮ ಬಾಲ್ಯವನ್ನು ಕಳೆದ ಅವರು ಕುಟುಂಬದೊಂದಿಗೆ ನೆರೆಹೊರೆಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು.
ಮೊರಾರಿ ಬಾಪು ಅವರ ರಾಮ್ ಕಥಾಕ್ಕೆ ಹಿನ್ನೆಲೆಯಾಗಿ ಭಗವಾನ್ ಹನುಮಂತನ ದೊಡ್ಡ ಚಿನ್ನದ ಚಿತ್ರವನ್ನು ಬ್ರಿಟಿಷ್ ಪ್ರಧಾನಿ ನೀಡಿದರು. “10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ನನ್ನ ಕಚೇರಿಯ ಮೇಜಿನ ಮೇಲೆ ಚಿನ್ನದ ಗಣೇಶ ಸಂತೋಷದಿಂದ ಕುಳಿತಿದ್ದಾನೆ ಎಂಬುದನ್ನೂ ಇದು ನೆನಪಿಸುತ್ತದೆ” ಎಂದು ಹೇಳಿದರು.
“ನಮ್ಮ ರಿಷಿ ಸಾಹೇಬ್ ಸಾಮಾನ್ಯ ವ್ಯಕ್ತಿಯಂತೆ ಇಲ್ಲಿದ್ದಾರೆ. ನಿಮಗೆ ಆತ್ಮೀಯ ಸ್ವಾಗತ. ಭಗವಾನ್ ಹನುಮಂತನು ನಿಮಗೆ ಮತ್ತು ಬ್ರಿಟಿಷ್ ಜನರಿಗೆ ಕ್ಷೇಮವನ್ನುಂಟುಮಾಡಲಿ” ಎಂದು ಆಧ್ಯಾತ್ಮಿಕ ನಾಯಕರಾದ ಮೊರಾರಿ ಬಾಪು ಅವರು ಪ್ರಧಾನ ಮಂತ್ರಿಯನ್ನು ಸ್ವಾಗತಿಸಿದರು.
ಹಿಂದೂ ನಂಬಿಕೆಯು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುತ್ತದೆ ಮತ್ತು ಬ್ರಿಟನ್ ಪ್ರಧಾನಿಯಾಗಿ ಅತ್ಯುತ್ತಮವಾದದ್ದನ್ನು ಮಾಡಲು ಧೈರ್ಯ ನೀಡುತ್ತದೆ ಎಂದು ಸುನಕ್ ಹೇಳಿದ್ದಾರೆ. “ನಂಬಿಕೆಯು ತುಂಬಾ ವೈಯಕ್ತಿಕವಾಗಿದೆ. ಇದು ನನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ನನಗೆ ಮಾರ್ಗದರ್ಶನ ನೀಡುತ್ತದೆ. ಪ್ರಧಾನಿಯಾಗುವುದು ದೊಡ್ಡ ಗೌರವ. ಮಾಡಲು ಕಠಿಣ ನಿರ್ಧಾರಗಳಿವೆ, ಎದುರಿಸಲು ಕಠಿಣ ಆಯ್ಕೆಗಳಿವೆ. ಧೈರ್ಯವನ್ನು ನಮ್ಮ ನಂಬಿಕೆ ನೀಡುತ್ತದೆ” ಎಂದು ಅವರು ಹೇಳಿದರು.
“ನಾನು ಬೆಳೆಯುತ್ತಿರುವಾಗ ಸೌತಾಂಪ್ಟನ್‌ನಲ್ಲಿರುವ ನಮ್ಮ ಮಂದಿರಕ್ಕೆ ಹೋಗುತ್ತಿದ್ದ ನೆನಪುಗಳು ನನಗೆ ತುಂಬಾ ಇಷ್ಟ. ನನ್ನ ಪೋಷಕರು ಮತ್ತು ಕುಟುಂಬದವರು ಹವನಗಳು, ಪೂಜೆಗಳು, ಆರತಿಗಳನ್ನು ಆಯೋಜಿಸುತ್ತಿದ್ದರು. ನಂತರ, ನನ್ನ ಸಹೋದರ ಸಹೋದರಿ ಮತ್ತು ಸೋದರಸಂಬಂಧಿಗಳೊಂದಿಗೆ ಮಧ್ಯಾಹ್ನದ ಊಟ ಮತ್ತು ಪ್ರಸಾದವನ್ನು ಜತೆಯಾಗಿ ಮಾಡುತ್ತಿದ್ದೆವು” ಎಂದು ಶ್ರೀ ಸುನಕ್ ನೆನೆದರು.
“ನಮ್ಮ ಮೌಲ್ಯಗಳು ಮತ್ತು ಬಾಪು ಅವರು ಪ್ರತಿ ದಿನ ಮಾಡುತ್ತಿರುವುದೆಂದರೆ ನಿಸ್ವಾರ್ಥ ಸೇವೆ, ಭಕ್ತಿ ಮತ್ತು ನಂಬಿಕೆ. ನಮಗೆ ತಿಳಿದಿರುವಂತೆ ಕರ್ತವ್ಯ ಅಥವಾ ಸೇವೆಯೇ ಶ್ರೇಷ್ಠ ಮೌಲ್ಯ. ಈ ಹಿಂದೂ ಮೌಲ್ಯಗಳು ಬ್ರಿಟಿಷ್ ಮೌಲ್ಯಗಳನ್ನು ಕೂಡ ಹಂಚಿಕೊಂಡಿವೆ,” ಎಂದವರು ಹೇಳಿದರು. ತನ್ನ ಕುಟುಂಬದ ವಲಸಿಗರ ಇತಿಹಾಸವನ್ನು ಉಲ್ಲೇಖಿಸಿದರು. ಕಥಾದಲ್ಲಿ ಸೇರಿದ್ದ ನೂರಾರು ಜನರಲ್ಲಿ ಎಷ್ಟು ಮಂದಿ ಭಾರತದಿಂದ ಬ್ರಿಟನ್‌ಗೆ ಬಂದಿದ್ದ ಪೋಷಕರು ಮತ್ತು ಅಜ್ಜ ಅಜ್ಜಿಯರನ್ನು ಹೊಂದಿದ್ದರು, ಅವರು ಹೇಗೆ ತಮ್ಮ ಪೀಳಿಗೆಗೆ ಅತ್ಯುತ್ತಮ ಅವಕಾಶಗಳನ್ನು ನೀಡಲು ಶ್ರಮಿಸಿದರು ಎಂದು ನೆನೆದುಕೊಂಡರು.
“ಬಾಪು ಅವರು ತಿಳಿಸುವ ರಾಮಾಯಣ, ಭಗವದ್ಗೀತೆ, ಹನುಮಾನ್ ಚಾಲೀಸಾಗಳನ್ನು ನೆನಪಿಸಿಕೊಳ್ಳುತ್ತೇನೆ. ನನಗೆ ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಲು, ಆಡಳಿತ ನಡೆಸಲು, ನಮ್ರತೆಯಿಂದ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡಲು ಶ್ರೀರಾಮನು ಯಾವಾಗಲೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾನೆ” ಎಂದರು. ತಮ್ಮ ಭಾಷಣವನ್ನು ʼಜೈ ಸಿಯಾ ರಾಮ್’ ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದರು.
ಇದನ್ನೂ ಓದಿ: Rishi Sunak: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಫೇವರಿಟ್ ಕ್ರಿಕೆಟಿಗ ಭಾರತೀಯನಂತೆ!