ಲಂಡನ್: ಬ್ರಿಟನ್‌ನ ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅರ್ಹರನ್ನು ಆಯ್ಕೆ ಮಾಡಲು ಕನ್ಸರ್ವೇಟಿವ್ ಪಾರ್ಟಿಯಲ್ಲಿ ನಡೆಯುತ್ತಿರುವ ಚುನಾವಣೆಯ ಮೂರನೇ ಸುತ್ತಿನಲ್ಲಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅತಿ ಹೆಚ್ಚು ಮತಗಳಿಂದ ಮುಂಚೂಣಿಯಲ್ಲಿದ್ದಾರೆ.
ಸ್ಪರ್ಧಿಗಳ ಪೈಕಿ ಟಾಮ್ ಟುಗೆನ್‌ಡಾಟ್ ಅವರು ಕಡಿಮೆ ಮತಗಳನ್ನು ಪಡೆದು ಕಣದಿಂದ ಹೊರಗುಳಿದಿದ್ದಾರೆ. ರಿಷಿ ಸುನಕ್ ಅವರು ೧೧೫ ಅಂಕಗಳನ್ನು ಪಡೆದು ಮುಂಚೂಣಿಯಲ್ಲಿದ್ದಾರೆ. ವಾಣಿಜ್ಯ ಸಚಿವ ಪೆನ್ನಿ ಮೋರ್‌ಡಂಟ್ ೮೨ ಮತಗಳಿಂದ ಎರಡನೇ ಸ್ಥಾನದಲ್ಲಿದ್ದಾರೆ. ವಿದೇಶಾಂಗ ಸಚಿವ ಲಿಜ್ ಟ್ರೂಸ್ ೭೧ ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿ ಇದ್ದಾರೆ. ಮಾಜಿ ಸಚಿವ ಕಿಮಿ ಬೆಡೆನಾಚ್ ೫೮ ಮತ ಗಳಿಸಿದ್ದಾರೆ.
ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯನೂ ಆಗಿರುವ ರಿಷಿ ಸುನಕ್ ಅವರು ಕಳೆದ ಸುತ್ತಿನಲ್ಲಿ ೧೦೧ ಮತ ಗಳಿಸಿದ್ದರು. ಈಗ ೧೪ ಮತ ಹೆಚ್ಚು ಗಳಿಸಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ೧೨೦ ಮತ ಗಳಿಸುವ ಅಭ್ಯರ್ಥಿ ಅಂತಿಮ ಕಣದಲ್ಲಿ ಉಳಿಯುವ ಇಬ್ಬರು ಸ್ಪರ್ಧಿಗಳ ಪಟ್ಟಿಗೆ ಸೇರ್ಪಡೆಯಾಗುತ್ತಾರೆ. ಈ ವಾರ ಅಂತಿಮ ಹಂತದ ಕೆಲ ಸುತ್ತುಗಳ ಮತದಾನ ನಡೆಯಲಿದೆ. ಸೆಪ್ಟೆಂಬರ್ ೫ಕ್ಕೆ ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ.