ಲಂಡನ್: ಬ್ರಿಟನ್‌ನ ಮುಂದಿನ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದಲ್ಲಿ ನಡೆಯುತ್ತಿರುವ ಚುನಾವಣೆಯ ಅಂತಿಮ ಸುತ್ತಿನ ಹಣಾಹಣಿಗೆ ಮಾಜಿ ಹಣಕಾಸು ಸಚಿವ, ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಮತ್ತು ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರುಸ್ ಪ್ರವೇಶಿಸಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಮತಗಳನ್ನು ಗೆಲ್ಲುವವರೇ ಬ್ರಿಟನ್‌ನ ನೂತನ ಪ್ರಧಾನಿಯಾಗಲಿದ್ದಾರೆ.
ಬುಧವಾರ ನಡೆದ ಮತದಾನದಲ್ಲಿ ಕೂಡ ರಿಷಿ ಸುನಕ್ ೧೩೭ ಮತಗಳನ್ನು ಪಡೆದು ಮುಂಚೂಣಿಯಲ್ಲಿದ್ದರು. ಹೀಗಿದ್ದರೂ ಅಂತಿಮ ಸುತ್ತಿನ ಹಣಾಹಣಿ ತೀವ್ರ ಕುತೂಹಲ ಮೂಡಿಸಿದೆ. ಒಂದು ಕಡೆ ಸಮೀಕ್ಷೆಗಳು ಕೊನೆಯ ಹಂತದಲ್ಲಿ ಏನು ಬೇಕಾದರೂ ಆಗಬಹುದು ಎನ್ನುತ್ತಿವೆ. ಮತ್ತೊಂದು ಕಡೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ರಿಷಿ ಸುನಕ್ ವಿರುದ್ಧ ಪ್ರಚಾರ ಮಾಡಿದ್ದಾರೆ. ಆದರೆ ಇದುವರೆಗಿನ ಎಲ್ಲ ಸುತ್ತುಗಳಲ್ಲಿ ರಿಷಿ ಸುನಕ್ ಮುಂಚೂಣಿಯಲ್ಲಿದ್ದಾರೆ. ಬುಧವಾರ ನಡೆದ ಸುತ್ತಿನಲ್ಲಿ ಟ್ರುಸ್ ೧೧೩ ಮತ ಗಳಿಸಿದ್ದರು.
ಸೆಪ್ಟೆಂಬರ್ ೫ಕ್ಕೆ ನೂತನ ಪ್ರಧಾನಿ ಘೋಷಣೆ: ಸೆಪ್ಟೆಂಬರ್ ೨ಕ್ಕೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದೆ. ಸೆಪ್ಟೆಂಬರ್ ೫ರಂದು ನೂತನ ಪ್ರಧಾನಿಯ ಯಾರು ಎಂಬುದು ಘೋಷಣೆಯಾಗಲಿದೆ. ಒಂದು ವೇಳೆ ರಿಷಿ ಸುನಕ್ ಗೆದ್ದರೆ, ಭಾರತೀಯ ಮೂಲದ ಬ್ರಿಟನ್ ನಾಗರಿಕರೊಬ್ಬರು ಮೊದಲ ಬಾರಿಗೆ ಬ್ರಿಟನ್ ಪ್ರಧಾನಿ ಹುದ್ದೆಗೆ ಏರಿದ ಇತಿಹಾಸ ಸೃಷ್ಟಿಯಾಗಲಿದೆ. ಹೀಗಾಗಿ ಫಲಿತಾಂಶ ಭಾರತದಲ್ಲೂ ಕುತೂಹಲ ಮೂಡಿಸಿದೆ.