ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅಳಿಯ, ಬ್ರಿಟನ್ ಪ್ರಧಾನಮಂತ್ರಿ ಹುದ್ದೆ ಆಕಾಂಕ್ಷಿ ರಿಷಿ ಸುನಕ್ ಅವರು ಲಂಡನ್ನಲ್ಲಿ ಗೋಪೂಜೆ ನೆರವೇರಿಸಿದ್ದಾರೆ. ಈ ವೇಳೆ ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ ಇದ್ದರು. ರಿಷಿ ಸುನಕ್ ಮತ್ತು ಅಕ್ಷತಾ ಇಬ್ಬರೂ ಸೇರಿ ಗೋವಿಗೆ ಆರತಿ ಮಾಡಿದ್ದಾರೆ. ಈ ವೇಳೆ ಪುರೋಹಿತರೊಬ್ಬರು ಮಂತ್ರಪಠಣ ಮಾಡಿದ್ದಾರೆ. ಅವರು ಗೋಪೂಜೆ ಮಾಡಿದ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದ್ದು ಮೆಚ್ಚುಗೆ ಪಡೆದಿದೆ. ಯುಕೆದಲ್ಲಿ ನೆಲೆಸಿರುವ ಭಾರತೀಯರೂ ಕೂಡ ಈ ಬಗ್ಗೆ ಶ್ಲಾಘಿಸಿದ್ದಾರೆ.
ಕಳೆದ ವಾರ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಸೇರಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದರು. ಭಕ್ತಿ ವೇದಾಂತಾ ಇಸ್ಕಾನ್ ದೇಗುಲಕ್ಕೆ ಭೇಟಿ ಕೊಟ್ಟಿದ್ದರು. ಈ ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಹಾಗೇ, ಕಳೆದ ವರ್ಷ ರಿಷಿ ಸುನಾಕ್ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ದೀಪ ಹಚ್ಚಿ ಸಂಭ್ರಮಿಸಿದ್ದರು.
ರಿಷಿ ಸುನಕ್ ಸದ್ಯ ಬ್ರಿಟನ್ ಪ್ರಧಾನಿ ಹುದ್ದೆಯ ರೇಸಿಂಗ್ನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬಳಿಕ ಮುಂದಿನ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದಲ್ಲಿ ಚುನಾವಣೆ ನಡೆಯುತ್ತಿದ್ದು, 4 ಹಂತದಲ್ಲಿ ರಿಷಿ ಸುನಕ್ ಗೆದ್ದಿದ್ದಾರೆ. ಸದ್ಯ ಅಂತಿಮ ಸುತ್ತಿಗೆ ರಿಷಿ ಸುನಕ್ ಮತ್ತು ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರುಸ್ ಪ್ರವೇಶ ಮಾಡಿದ್ದಾರೆ. ಈ ಚುನಾವಣೆ ಸೆಪ್ಟೆಂಬರ್ 2ಕ್ಕೆ ಮುಕ್ತಾಯವಾಗಲಿದ್ದು, ಸೆಪ್ಟೆಂಬರ್ 5ರಂದು ಬ್ರಿಟನ್ ಮುಂದಿನ ಪ್ರಧಾನಿ ಯಾರೆಂದು ಘೋಷಣೆಯಾಗಲಿದೆ.
ಇದನ್ನೂ ಓದಿ: ರಿಷಿ ಸುನಕ್‌ಗೆ ಮೂರನೇ ಸುತ್ತಿನಲ್ಲಿ ಗೆಲುವು, ಕಣದಲ್ಲಿ ಈಗ ನಾಲ್ಕೇ ಮಂದಿ