Site icon Vistara News

Rishi Sunak: ಪ್ರಧಾನಿಯಾಗಿ ಅಧಿಕಾರ ನಿರ್ವಹಿಸುವುದು ನನ್ನ ʼಧರ್ಮʼ ಎಂದ ರಿಷಿ ಸುನಕ್

Rishi Sunak and Britain PM

ಲಂಡನ್‌: ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದು ನನ್ನ ಧರ್ಮ ಎಂದು ಭಾವಿಸಿದ್ದೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್‌ ಹೇಳಿದ್ದಾರೆ.

ಭಾರತೀಯ ಮೂಲದ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ 100ನೇ ದಿನ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಿಯರ್ಸ್ ಮೋರ್ಗಾನ್‌ಗೆ ನೀಡಿದ ದೂರದರ್ಶನ ಸಂದರ್ಶನದಲ್ಲಿ ಅವರು ಈ ಮಾತನಾಡಿದ್ದಾರೆ. ಕಳೆದ ವರ್ಷದ ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಪ್ರಧಾನಿ ಕಾರ್ಯಾಲಯದ ಸೂತ್ರ ವಹಿಸಿಕೊಂಡ ಬಗ್ಗೆ ಅವರು ವಿಶ್ಲೇಷಿಸಿದ್ದಾರೆ.

“ನನಗೆ ಇದು ಕರ್ತವ್ಯ. ಹಿಂದೂ ಧರ್ಮದಲ್ಲಿ ಧರ್ಮ ಎಂಬ ಪರಿಕಲ್ಪನೆ ಇದೆ. ಸ್ಥೂಲವಾಗಿ ಅದನ್ನು ಕರ್ತವ್ಯ ಎಂದು ಭಾಷಾಂತರಿಸಬಹುದು. ಮತ್ತು ನಾನು ಬೆಳೆದದ್ದು ಹೀಗೆ. ನಮ್ಮಿಂದ ನಿರೀಕ್ಷಿಸಲಾದ ಕೆಲಸಗಳನ್ನು ಮಾಡುವುದು ಮತ್ತು ಸರಿಯಾದ ಕೆಲಸವನ್ನು ಮಾಡಲು ಪ್ರಯತ್ನಿಸುವುದು ಇದರ ಅರ್ಥ ಎಂದು ಅವರು ಉತ್ತರಿಸಿದ್ದಾರೆ.

“ಇದು ದುಃಸ್ವಪ್ನದಂಥ ಕೆಲಸವಾಗಿದ್ದರೂ, ನಾನು ಸುಧಾರಣೆ ತರಬಲ್ಲೆ ಮತ್ತು ಹಾಗೆ ಮಾಡಬಲ್ಲ ಸಾಮರ್ಥ್ಯವಿರುವ ಅತ್ಯುತ್ತಮ ವ್ಯಕ್ತಿ ನಾನು ಎಂದು ಭಾವಿಸಿದೆ. ಜನ ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ ನಾನು ನನ್ನ ಕರ್ತವ್ಯ ಮಾಡಲು ಮುಂದಾದೆ. ನಾನು ಸೇವೆಯನ್ನು ಆಳವಾಗಿ ನಂಬಿದ್ದೇನೆ. ಇದು ದೇಶಕ್ಕಾಗಿ ಬದಲಾವಣೆ ತರಬಹುದು ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Rishi Sunak | ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ವಿಷಯದಲ್ಲಿ ಭಾರತ ಪ್ರಧಾನಿ ಪರ ನಿಂತ ಬ್ರಿಟನ್‌ ಪ್ರಧಾನಿ ರಿಷಿ ಸುನಕ್

ರಿಷಿ ಅವರು ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆಯಾದಾಗ ಭಗವದ್ಗೀತೆಯನ್ನು ಬಳಸಿಕೊಂಡು ನಿಷ್ಠೆಯ ಪ್ರಮಾಣವಚನ ಸ್ವೀಕರಿಸಿದ್ದರು. 42 ವರ್ಷದ ರಿಷಿ, ತಮ್ಮ ಹಿಂದೂ ನಂಬಿಕೆಗಳ ಬಗ್ಗೆ, ಅವುಗಳು ತಮಗೆ ನೀಡುವ ಶಕ್ತಿಯ ಬಗ್ಗೆ ಆಗಾಗ ಉಲ್ಲೇಖಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ನಿಯಮಿತವಾಗಿ ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಕಳೆದ ವರ್ಷ ತಮ್ಮ ಪ್ರಚಾರದ ಸಮಯದಲ್ಲಿ ಅವರು ಲಂಡನ್‌ನ ಹರೇ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ, ತಮ್ಮ ಪತ್ನಿಯಾದ ಅಕ್ಷತಾ ಅವರು ತಮ್ಮ ಬೆನ್ನೆಲುಬು ಎಂದು ಹೇಳಿದ್ದಾರೆ. ಅವಳನ್ನು ಪತ್ನಿಯಾಗಿ ಹೊಂದಿದ್ದು ತನ್ನ ಅದೃಷ್ಟ. ಅವಳ ಪ್ರೀತಿ ಮತ್ತು ಬೆಂಬಲವಿಲ್ಲದೆ ನಾನು ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಅಕ್ಷತಾ ಅವರ ತೆರಿಗೆ ಪಾವತಿಯ ವಿವರಗಳನ್ನೂ ಇಷ್ಟರಲ್ಲಿಯೇ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Rishi Sunak | ಚಲಿಸುವ ಕಾರಿನಲ್ಲಿ ಸೀಟ್‌ ಬೆಲ್ಟ್‌ ಹಾಕದ ಬ್ರಿಟನ್‌ ಪ್ರಧಾನಿ ರಿಷಿಗೆ ದಂಡ!

Exit mobile version