ಲಂಡನ್: ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಬೆನ್ನಲ್ಲೇ ಭಾರತ ಮೂಲದ ರಿಷಿ ಸುನಕ್ (Rishi Sunak) ಅವರು ಮೊದಲ ಬಾರಿಗೆ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಮೊದಲ ಭಾಷಣದಲ್ಲಿಯೇ ಅವರು ಆರ್ಥಿಕ ಸುಧಾರಣೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, “ಆಣೆ ಮಾಡಿ ಹೇಳುತ್ತೇನೆ, ಮೂಲಭೂತವಾದವನ್ನು ತೊಲಗಿಸದ ಹೊರತು ನಾವು ಆರ್ಥಿಕ ಏಳಿಗೆ ಹೊಂದಲು ಸಾಧ್ಯವಿಲ್ಲ” ಎನ್ನುವ ಮೂಲಕ ಉಗ್ರವಾದದ ವಿರುದ್ಧ ಸಮರ ಸಾರಿದ್ದಾರೆ.
“ನಾನು ಎಷ್ಟು ಸಾಧ್ಯವೋ ಅಷ್ಟು ತೆರಿಗೆ ಕಡಿತ ಮಾಡುತ್ತೇನೆ. ನಿಮ್ಮ ಜೇಬಿನ ಹಣ ನಿಮ್ಮ ಜೇಬಿನಲ್ಲಿಯೇ ಉಳಿಯುವಂತೆ ಮಾಡುತ್ತೇನೆ. ನಿಜವಾದ ಬದಲಾವಣೆ ಎಂದರೆ, ಆಣೆ ಮಾಡಿ ಹೇಳುತ್ತೇನೆ, ನಾವು ಮೂಲಭೂತವಾದವನ್ನು ತೊಲಗಿಸದ ಹೊರತು ಆರ್ಥಿಕವಾಗಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಜಗತ್ತಿನಲ್ಲೇ ಹೆಚ್ಚು ಹೂಡಿಕೆಗೆ ಬ್ರಿಟನ್ ಪ್ರಾಶಸ್ತ್ಯವಾದ ದೇಶವಾಗಿದೆ. ಹಾಗಾಗಿ, ಆರ್ಥಿಕ ಏಳಿಗೆ ಜತೆಗೆ ಮೂಲಭೂತವಾದವನ್ನು ತೊಲಗಿಸಬೇಕಿದೆ” ಎಂದು ಹೇಳಿದರು.
ತೆರಿಗೆ ಕಡಿತ ನಿಶ್ಚಿತ
“ನಾನು ಕಡಿಮೆ ತೆರಿಗೆ ವಿಧಿಸುತ್ತೇನೆ. ತೆರಿಗೆಯನ್ನು ಕಡಿತಗೊಳಿಸುತ್ತೇನೆ. ಏಕೆಂದರೆ, ಹಣದುಬ್ಬರಕ್ಕಿಂದ ದೊಡ್ಡ ವೈರಿ ಇಲ್ಲ. ಇದು ಪ್ರತಿಯೊಬ್ಬರನ್ನೂ ಬಡವರನ್ನಾಗಿಸುತ್ತದೆ. ಹಾಗಾಗಿ, ತೆರಿಗೆ ಹೊರೆ ಇಳಿಸುವ ದಿಸೆಯಲ್ಲಿ ಖಂಡಿತವಾಗಿಯೂ ಶ್ರಮಿಸುತ್ತೇನೆ. ಹಾಗಾಗಿ, ಜನ ಯಾವುದೇ ಆತಂಕಪಡುವ ಅಗತ್ಯವೇ ಇಲ್ಲ” ಎಂದು ಭರವಸೆ ನೀಡಿದರು.
ಇದು ಕೇವಲ ಭರವಸೆ ಅಲ್ಲ, ವಿಶ್ವಾಸ
“ಕನ್ಸರ್ವೇಟಿವ್ ಪಕ್ಷದವರು ಪ್ರತಿಯೊಬ್ಬರಲ್ಲಿಯೂ ನಂಬಿಕೆ ಇಡುತ್ತಾರೆ. ಹಾಗಾಗಿ, ನಾನು ದೇಶದ ಬದಲಾವಣೆ ಕುರಿತು ಕೇವಲ ಭರವಸೆ ನೀಡುವುದಿಲ್ಲ, ಈಡೇರಿಸಿಯೇ ಈಡೇಸುತ್ತೇನೆ ಎಂಬ ವಿಶ್ವಾಸವಿದೆ. ಅದು ಬ್ರೆಕ್ಸಿಟ್ ಇರಬಹುದು, ದೇಶದ ಶಿಕ್ಷಣ, ತಂತ್ರಜ್ಞಾನ, ರಕ್ಷಣೆ, ಜಾಗತಿಕ ಸಂಬಂಧ, ಜಾಗತಿಕ ಬೆಳವಣಿಗೆಗಳೇ ಇರಬಹುದು. ಎಲ್ಲ ಕ್ಷೇತ್ರಗಳನ್ನು ಏಳಿಗೆಯತ್ತ ಕೊಂಡೊಯ್ಯುವುದೇ ನನ್ನ ಗುರಿ” ಎಂದು ತಿಳಿಸಿದರು.
ತಂದೆ-ತಾಯಿಯ ನೆನೆದ ಸುನಕ್
ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮಾಡಿದ ಮೊದಲ ಭಾಷಣದಲ್ಲಿ ತಂದೆ-ತಾಯಿಯನ್ನು ನೆನೆದಿದ್ದಾರೆ. “ಬೇರೆ ದೇಶದಿಂದ ಬ್ರಿಟನ್‌ಗೆ ಬಂದ ನನ್ನ ತಂದೆ-ತಾಯಿಯು ಭವಿಷ್ಯ ಕಟ್ಟಿಕೊಂಡರು. ನಮಗೆಲ್ಲ ಉತ್ತಮ ಭವಿಷ್ಯ ನೀಡಿದರು. ಬ್ರಿಟನ್ ಜನ ಅವರಿಗಿಂತ ಉತ್ತಮ ಜೀವನ ಸಾಗಿಸುವಂತೆ ಮಾಡಬೇಕು ಎಂಬುದು ನನ್ನ ಆಶಯ. ಇಂದು ನನ್ನ ಏಳಿಗೆಯನ್ನು ನೋಡಲು ನನ್ನ ತಂದೆ-ತಾಯಿ ಇಲ್ಲ. ಆದರೆ, ನನ್ನ ಹೆಂಡತಿ, ಇಬ್ಬರು ಮಕ್ಕಳಿದ್ದಾರೆ. ನಾನು ಅವರನ್ನು ತುಂಬ ಪ್ರೀತಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ | Rishi Sunak | ರಿಷಿ ಸುನಕ್ ಎದುರು ಬೆಟ್ಟದಷ್ಟು ಸವಾಲು, ಇವುಗಳನ್ನು ಬಗೆಹರಿಸಬೇಕು ಮೊದಲು