ಲಂಡನ್: ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ನಂತರ ಬ್ರಿಟನ್‌ನ ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅರ್ಹರನ್ನು ಆಯ್ಕೆ ಮಾಡಲು ಕನ್ಸರ್ವೇಟಿವ್ ಪಾರ್ಟಿಯಲ್ಲಿ ನಡೆಯುತ್ತಿರುವ ಚುನಾವಣೆಯ ಮೊದಲ ಸುತ್ತಿನಲ್ಲಿ ಹಣಕಾಸು ಸಚಿವ ರಿಷಿ ಸುನಕ್ ಅತಿ ಹೆಚ್ಚು ಮತ ಪಡೆದು ಮುಂಚೂಣಿಯಲ್ಲಿದ್ದಾರೆ.
ಭಾರತೀಯ ಮೂಲದ, ಕರ್ನಾಟಕದ ಅಳಿಯ ರಿಷಿ ಸುನಕ್ ೮೮ ಮತಗಳನ್ನು ಪಡೆದಿದ್ದಾರೆ. ನಿರೀಕ್ಷೆಯಂತೆ ವಾಣಿಜ್ಯ ಸಚಿವೆ ಪೆನ್ನಿ ಮೋರ್ಡ್ಂಟ್ ೬೭ ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಅವರು ರಿಷಿ ಸುನಕ್‌ಗೆ ತೀವ್ರ ಪೈಪೋಟಿ ನೀಡುವುದು ಸ್ಪಷ್ಟವಾಗಿದೆ. ವಿದೇಶಾಂಗ ಸಚಿವ ಲಿಜ್ ಟ್ರೂಸ್ ೫೦ ಮತ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಪಕ್ಷದ ೮೭೬ ಸಂಸದರು ಮತ ಚಲಾವಣೆ ಮಾಡಲಿದ್ದಾರೆ. ಮೊದಲ ಸುತ್ತಿನಲ್ಲಿಯೇ ಇಬ್ಬರು ಸ್ಪರ್ಧಿಗಳು ಹೊರ ಬಿದ್ದಿದ್ದು, ಈ ಮೂವರು ಮಾತ್ರವಲ್ಲದೆ ಇನ್ನೂ ಮೂವರು ಪಕ್ಷದ ನಾಯಕರು ಕಣದಲ್ಲಿ ಉಳಿದುಕೊಂಡಿದ್ದಾರೆ. ಒಟ್ಟಾರೆ ಆರು ಮಂದಿ ಈಗ ರೇಸ್‌ನಲ್ಲಿದ್ದಾರೆ.
ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದ್ದು, ಕಣದಲ್ಲಿದ್ದ ಒಟ್ಟು ಎಂಟು ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಇಬ್ಬರೇ ಕಣದಲ್ಲಿ ಉಳಿದುಕೊಳ್ಳಲಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳ ನಡುವೆ ಪ್ರಧಾನಿ ಹುದ್ದೆಗೆ ಹಣಾಹಣಿ ನಡೆಯಲಿದೆ. ಈಗ ಮೊದಲ ಸುತ್ತಿನ ಮತದಾನ ನಡೆದಿದ್ದು, ಗುರುವಾರ ಉಳಿದ ಸುತ್ತಿನ ಮತದಾನ ನಡೆಯಲಿದೆ. ಅಗತ್ಯವೆನಿಸಿದರೆ ಮುಂದಿನ ವಾರದವರೆಗೂ ಹಲವು ಸುತ್ತಿನ ಮತದಾನ ನಡೆಸಿ, ಇಬ್ಬರನ್ನು ಆಯ್ಕೆ ಮಾಡಲಾಗುತ್ತದೆ.
ಕೊನೆಯಲ್ಲಿ ಕಣದಲ್ಲುಳಿಯುವ ಇಬ್ಬರಲ್ಲಿ ಪ್ರಧಾನಿ ಯಾರೆಂಬುದನ್ನು ದೇಶಾದ್ಯಂತ ಇರುವ ಪಕ್ಷದ ೧೮೦,೦೦೦ ಸದಸ್ಯರು ಮತದಾನದ ಮೂಲಕ ನಿರ್ಣಯಿಸಲಿದ್ದಾರೆ. ಸೆಪ್ಟೆಂಬರ್ ೫ ರಂದು ಯಾರು ಆಯ್ಕೆಯಾಗಿದ್ದಾರೆ ಎಂಬುದನ್ನು ಪ್ರಕಟಿಸಲಾಗುತ್ತದೆ. ಇದರಲ್ಲಿ ಆಯ್ಕೆಯಾದವರು ಸಾರ್ವತ್ರಿಕ ಚುನಾವಣೆ ಎದುರಿಸದೇ ಪ್ರಧಾನಿ ಹುದ್ದೆಗೇರಲಿದ್ದಾರೆ.
ಈಗ ರೇಸ್‌ನಲ್ಲಿ ಮುಂದಿರುವ ರಿಷಿ ಸುನಕ್ ಇನ್‌ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಅಳಿಯ. ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು ಮದುವೆಯಾಗಿದ್ದಾರೆ. ರಿಷಿ ಇಂಗ್ಲೆಂಡಿನ ಸೌತಾಂಪ್ಟನ್‌ನಲ್ಲಿ ನೆಲೆಸಿದ್ದ ಯಶ್ವೀರ್ ಮತ್ತು ಉಷಾ ಸುನಕ್ ಎಂಬ ದಂಪತಿಗೆ 1980ರಲ್ಲಿ ಜನಿಸಿದವರು. ಇವರ ಅಜ್ಜ ಅಜ್ಜಿ ಪಂಜಾಬ್‌ನಿಂದ ವಲಸೆ ಹೋದವರು.
ಇದನ್ನೂ ಓದಿ | ವಿಸ್ತಾರ Explainer: ರಾಜೀನಾಮೆ ನೀಡಿದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗುವರೇ?