ಲಂಡನ್: ಬ್ರಿಟನ್ ಪ್ರಧಾನಿ ಪದವಿಗೆ ಕನ್ಸರ್ವೇಟಿವ್ ಪಕ್ಷದ ಹುದ್ದರಿಗಳ ನಡುವೆ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಮಂಗಳವಾರ ನಡೆದ ನಾಲ್ಕನೇ ಸುತ್ತಿನ ಮತದಾನದಲ್ಲೂ ರಿಷಿ ಸುನಕ್ ಮುನ್ನಡೆ ಸಾಧಿಸಿದ್ದಾರೆ.
118 ಮತಗಳೊಂದಿಗೆ ರಿಷಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮುನ್ನಡೆ ದಾಖಲಿಸಿದರು. ಕಳೆದ ವಾರ ವೋಟಿಂಗ್ ಆರಂಭವಾದ ಬಳಿಕ ಪ್ರತಿಯೊಂದು ಹಂತದಲ್ಲೂ ರಿಷಿ ಮುಂದಿದ್ದಾರೆ. ಮಾಜಿ ರಕ್ಷಣಾ ಸಚಿವೆ ಪೆನ್ನಿ ಮೋರ್ಡಾಂಟ್, ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಹಾಗೂ ಶಾಸಕಿ ಕೆಮಿ ಬಡೆನೋಚ್ ಅವರು ರಿಷಿಗಿಂತ ಹಿಂದಿದ್ದಾರೆ. ಮೂವರೂ ಕ್ರಮವಾಗಿ 92, 86, 59 ಮತಗಳನ್ನು ಗಳಿಸಿದ್ದಾರೆ.
ಐದನೇ ಸುತ್ತಿನ ಮತದಾನ ಬುಧವಾರ ನಡೆಯಲಿದೆ. ಈ ರೌಂಡ್‌ನಲ್ಲಿ ಬಡೆನೋಚ್ ಹೊರಹೋಗಲಿದ್ದು, ಇತರ ಇಬ್ಬರು ರಿಷಿಗೆ ಸ್ಪರ್ಧೆ ನೀಡಲಿದ್ದಾರೆ. ಆರನೇ ಸುತ್ತಿನ ಮತದಾನದ ಬಳಿಕ ಇಬ್ಬರು ಸ್ಪರ್ಧಿಗಳು ಉಳಿಯುತ್ತಾರೆ. ಆ ಇಬ್ಬರು ಸ್ಪರ್ಧಿಗಳು ಟೋರಿ ಪಕ್ಷದ 1,18,000 ಸದಸ್ಯರ ಮುಂದೆ ಸ್ಪರ್ಧೆಗೆ ಇಳಿಯಲಿದ್ದಾರೆ. ಸೆಪ್ಟೆಂಬರ್ 5ರಂದು ಅಂತಿಮ ಮತದಾನ ನಡೆದು ಫಲಿತಾಂಶ ಗೊತ್ತಾಗಲಿದೆ.
ಈ ನಡುವೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ತಾವು ಪ್ರಧಾನಿ ಪಟ್ಟ ತ್ಯಜಿಸುವುದನ್ನು ಅನಿವಾರ್ಯವಾಗಿಸಿದ ರಿಷಿ ಸುನಕ್ ವಿರುದ್ಧ ಪ್ರಚಾರದಲ್ಲಿ ನಿರತರಾಗಿದ್ದಾರೆ.
ರಿಷಿ ಸುನಕ್ ಅವರು ಜನಪ್ರತಿನಿಧಿಗಳ ನಡುವೆ ಹೆಚ್ಚಿನ ಮತಗಳನ್ನು ಗಳಿಸಲು ಶಕ್ತರಾಗಿದ್ದರೂ, ಪಕ್ಷದ ಸರ್ವ ಸದಸ್ಯರ ಚುನಾವಣೆಯಲ್ಲಿ ಸೋಲಲಿದ್ದಾರೆ ಎಂದು ಒಂದು ಸಮೀಕ್ಷೆ ಹೇಳಿದೆ. ಪಕ್ಷದ ಒಟ್ಟಾರೆ ಸದಸ್ಯರಲ್ಲಿ ಹೆಚ್ಚಿನವರು ರಿಷಿ ವಿರುದ್ಧ ಅಭಿಪ್ರಾಯ ಹೊಂದಿದ್ದು, ಅಂತಿಮ ಮತದಾನದಲ್ಲಿ ಅವರ ವಿರುದ್ಧ ಫಲಿತಾಂಶ ಬರಲಿದೆ ಎಂದು YouGov ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: ರಿಷಿ ಸುನಕ್‌ರನ್ನು ಪ್ರಧಾನಿಯಾಗಿ ಆರಿಸಲೇಬೇಡಿ: ಬೋರಿಸ್ ಜಾನ್ಸನ್ ಪ್ರಚಾರ!