ಲಂಡನ್: ಬ್ರಿಟನ್ ಸಾರ್ವತ್ರಿಕ ಚುನಾವಣೆಯ (Britain Election) ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್ ನಂಬರ್ 320 ಅನ್ನು ದಾಟುವ ಮೂಲಕ ಸರ್ಕಾರ ರಚಿಸಿದೆ. ಇನ್ನು ಇದುವರೆಗೆ ಪ್ರಧಾನಿಯಾಗಿದ್ದ ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ (Rishi Sunak) ಅವರು ರಾಜೀನಾಮೆ ನೀಡಿದ್ದಾರೆ. ಇನ್ನು ರಾಜೀನಾಮೆ ನೀಡಿ, ವಿದಾಯದ ಭಾಷಣ ಮಾಡುವಾಗ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಅವರು ಧರಿಸಿದ್ದ ಡ್ರೆಸ್ ಹಾಗೂ ಅದರ ಮೌಲ್ಯದ ಕುರಿತು ಭಾರಿ ಚರ್ಚೆ ಶುರುವಾಗಿದೆ.
ಚುನಾವಣೆಯಲ್ಲಿ ಹಿನ್ನಡೆಯಾಗುತ್ತಲೇ ದೇಶದ ಜನರನ್ನು ಉದ್ದೇಶಿಸಿ ರಿಷಿ ಸುನಕ್ ಮಾತನಾಡಿದರು. “ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಅವರು ಹೇಳಿದರು. ಇದೇ ವೇಳೆ, ಅವರ ಹಿಂದೆ ಅಕ್ಷತಾ ಮೂರ್ತಿ ಅವರು ನಿಂತಿದ್ದರು. ಅಷ್ಟೇ ಅಲ್ಲ, ಅಕ್ಷತಾ ಮೂರ್ತಿ ಅವರು ಧರಿಸಿದ್ದ, ಇಂಡಿಯನ್ ಲೇಬಲ್‌ನ ಡ್ರೆಸ್ ಕುರಿತು ಭಾರಿ ಚರ್ಚೆಯಾಗುತ್ತಿದೆ. ಬ್ರಿಟನ್ ರಾಷ್ಟ್ರಧ್ವಜದಲ್ಲಿರುವ ನೀಲಿ, ಕೆಂಪು ಹಾಗೂ ವೈಟ್ ಪಟ್ಟಿಗಳು ಇರುವ, ಹೈ ನೆಕ್ಡ್ ಆಗಿರುವ ಡ್ರೆಸ್‌ಅನ್ನು ಅಕ್ಷತಾ ಮೂರ್ತಿ ಧರಿಸಿದ್ದು, ಇದರ ಬೆಲೆ 42 ಸಾವಿರ ರೂ. ಇದೆ ಎಂದು ತಿಳಿದುಬಂದಿದೆ.
Sunak’s wife wearing a dress that represents the Tory vote in the #GeneralElection2024 pic.twitter.com/BIiERn2juY
— James (@jamesbwfc22) July 5, 2024
ಬ್ರಿಟನ್ ಪ್ರಧಾನಿಯಾಗಿ ಲೇಬರ್ ಪಕ್ಷದ ಕೀರ್ ಸ್ಟಾರ್ಮರ್ ಆಯ್ಕೆಯಾಗಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ದೇಶದ ಜನರ ಸೇವೆ ಮಾಡುವುದೇ ನಮಗೆ ಭಾಗ್ಯವಾಗಿದೆ. ನೀವು ಲೇಬರ್ ಪಕ್ಷಕ್ಕೆ ಮತ ಹಾಕಿದ್ದೀರೋ, ಬಿಟ್ಟಿದ್ದೀರೋ ಅದು ಬೇಕಾಗಿಲ್ಲ. ದೇಶದ ಪ್ರತಿಯೊಬ್ಬರಿಗೂ ಉತ್ತಮ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಿದೆ. ರಾಜಕೀಯ ಎಂದರೆ ಉತ್ತಮ ಆಡಳಿತ ನೀಡುವುದು, ರಾಜಕೀಯವನ್ನು ಸಕಾರಾತ್ಮಕ ಸಂಗತಿಗಾಗಿ ಬಳಸಿಕೊಳ್ಳುತ್ತೇವೆ. ಮತಗಳನ್ನು ನೀಡಿ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು. ಕೀರ್ ಸ್ಟಾರ್ಮರ್ ಅವರು ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರ ಆಡಳಿತವನ್ನೂ ಹೊಗಳಿದ್ದು ವಿಶೇಷವಾಗಿತ್ತು.
ಬ್ರಿಟನ್ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ಅವರು ಆಯ್ಕೆಯಾಗುತ್ತಲೇ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕೀರ್ ಸ್ಟಾರ್ಮರ್ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಬ್ರಿಟನ್ ಒಗ್ಗೂಡಿ, ಸಂಬಂಧವನ್ನು ವೃದ್ಧಿಸಿಕೊಂಡು ಉಭಯ ದೇಶಗಳ ಏಳಿಗೆಗೆ ಶ್ರಮಿಸುವ ವಿಶ್ವಾಸವಿದೆ” ಎಂಬುದಾಗಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ, ಇದುವರೆಗೆ ಆಡಳಿತ ನಡೆಸಿದ, ಭಾರತದ ಮೂಲದ ರಿಷಿ ಸುನಕ್ ಅವರ ಬಗ್ಗೆಯೂ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: Keir Starmer: ಬ್ರಿಟನ್ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ