Site icon Vistara News

Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್​ ಫ್ಯಾಕ್ಟರಿ

River turns Red colour

ಜಪಾನ್​ನ ನಾಗೋ ಸಿಟಿ (Japan Nago city) ಯಲ್ಲಿ ನದಿಯೊಂದು ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿ (River Turns Red In Japan), ಒಂದು ಕ್ಷಣ ಸ್ಥಳೀಯರನ್ನು ಆತಂಕಕ್ಕೆ ನೂಕಿತು. ನದಿ ಬಣ್ಣ ಕೆಂಪಾಗಿದ್ದರ ಫೋಟೋ-ವಿಡಿಯೊಗಳನ್ನು ಒಂದಷ್ಟು ಮಂದಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral Video) ಮಾಡಿಕೊಂಡಿದ್ದಾರೆ. ಹೀಗೆ ನಿಗೂಢವಾಗಿ ಬಣ್ಣ ಬದಲಾಗಿದ್ದಕ್ಕೆ ಕಾರಣ ಏನಿರಬಹುದು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯನ್ನೂ ನಡೆಸುತ್ತಿದ್ದಾರೆ. ನದಿ ನೀರು ಕೆಂಪಾಗಿ, ಸೋಷಿಯಲ್ ಮೀಡಿಯಾದಲ್ಲಿ ಆತಂಕ ಭರಿತ ಚರ್ಚೆಯಾಗುತ್ತಿರುವ ಮಧ್ಯೆಯೇ ಬಿಯರ್ ತಯಾರಿಕಾ ಕಾರ್ಖಾನೆ ಸ್ಪಷ್ಟನೆ ನೀಡಿದೆ. ನದಿ ನೀರು ಕೆಂಪಾಗಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದೆ.

ಆ ನದಿ ಬಳಿ ಇರುವ ಬಂದರಿನಲ್ಲಿ ಬಿಯರ್​ ತಯಾರಿಕಾ ಕಾರ್ಖಾನೆಯೊಂದಿದ್ದು, ಅದರಲ್ಲಿ ಬಳಸುವ ಫುಡ್ ಕಲರ್​ (ಆಹಾರಕ್ಕೆ ನೀಡುವ ಕೃತಕ ಬಣ್ಣ) ನದಿ ಸೇರಿದೆ ಎನ್ನಲಾಗಿದೆ. ಈ ಫುಡ್​ ಕಲರ್​ ಕಾರ್ಖಾನೆಯಿಂದ ಸರಿಯಾದ ಕೊಳವೆ ಮೂಲಕವೇ ಹೊರಹೋಗಿತ್ತು. ಆದರೆ ಅತಿಯಾದ ಮಳೆಯ ಕಾರಣಕ್ಕೆ ಮಳೆ ನೀರು ಹೋಗುವ ಕಾಲುವೆಯಲ್ಲಿ ಈ ಫುಡ್​ ಕಲರ್​ ಸೇರಿಕೊಂಡು ನದಿಗೆ ತಲುಪಿದೆ. ಕಾರ್ಖಾನೆಯ ತ್ಯಾಜ್ಯ ಹೋಗುವ ಕೊಳವೆ ಲೀಕ್ ಆಗಿದೆ. ಯಾರೂ ಹೆದರುವ ಅಗತ್ಯವಿಲ್ಲ. ಆಹಾರದ ಬಣ್ಣ ಹೆಚ್ಚಿನ ಪ್ರಮಾಣದಲ್ಲಿ ನದಿ ನೀರು ಸೇರಿದ್ದರಿಂದ ಹೀಗೆ ನೀರು ಕೆಂಪಾಗಿದೆ. ಅದು ಆರೋಗ್ಯಕ್ಕೆ ಏನೂ ತೊಂದರೆ ಮಾಡುವುದಿಲ್ಲ ಎಂದು ಬಿಯರ್​ ಕಾರ್ಖಾನೆ ತಿಳಿಸಿದೆ.

ಮಂಗಳವಾರ ಬೆಳಗ್ಗೆ 9.30ರ ಹೊತ್ತಿಗೆ ಹೀಗೆ ನದಿ ಕೆಂಪಗಾಗಿತ್ತು. ಕೆಲವೇ ಹೊತ್ತಲ್ಲಿ ಓರಿಯನ್​ ಬ್ರೀವರೀಸ್​ ಎಂಬ ಬಿಯರ್ ಕಾರ್ಖಾನೆ ಹೇಳಿಕೆ ಬಿಡುಗಡೆ ಮಾಡಿತು. ಜನರು ಆತಂಕಕ್ಕೀಡಾಗುವಂತೆ ಮಾಡಿದ್ದಕ್ಕೆ ಕ್ಷಮೆಯನ್ನೂ ಕೇಳಿತು. ಇದು ಸಾಮಾನ್ಯ ಆಹಾರಕ್ಕೆ ಹಾಕುವ ಬಣ್ಣ, ಯಾವುದೇ ರಾಸಾಯನಿಕ ಅಲ್ಲ ಎಂದು ಹೇಳಿದೆ. ಹಾಗೇ, ಈ ಬಿಯರ್ ಕಂಪನಿ ಮುಖ್ಯಸ್ಥ ಹಾಜಿಮಿ ಮರಾನೋ ಕೂಡ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಾರ್ಖಾನೆಯ ಫುಡ್​ ಕಲರ್​ ಹೇಗೆ ಲೀಕ್ ಆಯಿತು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Exit mobile version