Site icon Vistara News

ನೇಪಾಳ: ನದಿಗೆ ಉರುಳಿದ ಭಾರತೀಯರು ಸೇರಿ 40 ಮಂದಿ ಪ್ರಯಾಣಿಸುತ್ತಿದ್ದ ಬಸ್‌; 14 ಮಂದಿ ಸಾವು?

Road Accident

ಕಠ್ಮಂಡು: ಭಾರತೀಯರು ಸೇರಿದಂತೆ 40 ಮಂದಿ ಪ್ರಯಾಣಿಸುತ್ತಿದ್ದ, ಭಾರತ ಮೂಲದ ಬಸ್‌ ನೇಪಾಳ(Nepal)ದಲ್ಲಿ ನದಿಗೆ ಉರುಳಿ ಬಿದ್ದಿದೆ. ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಶುಕ್ರವಾರ ಬಸ್‌ ಉರುಳಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಘಟನೆಯ ಬಗ್ಗೆ ಇನ್ನಷ್ಟು ವಿವರ ಇನ್ನಷ್ಟೇ ಹೊರ ಬೀಳಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ (Road Accident).

ಬಸ್ ನದಿಯ ದಡದಲ್ಲಿ ಕಂಡುಬಂದಿದೆ ಎಂದು ತನಾಹುನ್ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್‌ಪಿ ದೀಪ್‌ ಕುಮಾರ್‌ ತಿಳಿಸಿದ್ದಾರೆ. “ಯುಪಿ ಎಫ್‌ಟಿ 7623 (UP FT 7623) ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಉರುಳಿ ಬಿದ್ದಿದ್ದು ಸದ್ಯ ದಡದಲ್ಲಿ ಕಂಡು ಬಂದಿದೆ. ಘಟನೆ ಬಗ್ಗೆ ಮಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ” ಎಂದು ಮೂಲಗಳು ತಿಳಿಸಿವೆ. ಬಸ್ ನೇಪಾಳದ ಪೋಖಾರಾದಿಂದ ಕಠ್ಮಂಡುವಿಗೆ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಅಪಘಾತದಲ್ಲಿ ರಾಜ್ಯದ ಯಾರಾದರೂ ಗಾಯಗೊಂಡಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎನ್ನುವ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳ ದಂಡು ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ನೇಪಾಳದಲ್ಲಿ ಹೆಲಿಕಾಪ್ಟರ್‌ ಪತನ

ನೇಪಾಳದ ನುವಾಕೋಟ್ ಜಿಲ್ಲೆಯ ಶಿವಪುರಿ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಏರ್ ಡೈನಾಸ್ಟಿ ಹೆಲಿಕಾಪ್ಟರ್ ಪತನ (Helicopter crashed)ಗೊಂಡಿತ್ತು. ಈ ಘಟನೆಯಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟು ಸೈಫ್ರುಬೆನ್ಸಿಗೆ ತೆರಳುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೆಲಿಕಾಪ್ಟರ್ ಅನ್ನು ಹಿರಿಯ ಕ್ಯಾಪ್ಟನ್ ಅರುಣ್ ಮಲ್ಲಾ ಅವರು ಚಲಾಯಿಸಿದ್ದು, ಟೇಕ್ ಆಫ್ ಆದ ಕೇವಲ ಮೂರು ನಿಮಿಷಗಳ ನಂತರ ಹೆಲಿಕಾಪ್ಟರ್‌ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿತ್ತು.

ಇದನ್ನೂ ಓದಿ: Plane Crash: ನೇಪಾಳದಲ್ಲಿ 19 ಪ್ರಯಾಣಿಕರಿದ್ದ ವಿಮಾನ ಪತನ; ವಿಡಿಯೋ ಇದೆ

ಹೆಲಿಕಾಪ್ಟರ್ ಟೇಕಾಫ್ ಆಗುವಾಗ ಅದರಲ್ಲಿ ನಾಲ್ವರು ಚೀನಾದ ಪ್ರಜೆಗಳು ಮತ್ತು ಪೈಲಟ್ ಸೇರಿದಂತೆ ಒಟ್ಟು ಐದು ಮಂದಿ ಇದ್ದರು. ಚೀನಾದ ಪ್ರಜೆಗಳು ರಾಸುವಾಗೆ ತೆರಳುತ್ತಿದ್ದರು. ಈ ವೇಳೆ ಕಠ್ಮಂಡುವಿನ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ನೆಲಕ್ಕಪ್ಪಳಿಸಿತ್ತು. ಸೂರ್ಯ ಚೌರ್ ತಲುಪಿದ ನಂತರ 1:57ರ ಸುಮಾರಿಗೆ ಹೆಲಿಕಾಪ್ಟರ್ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು.

ಅದಕ್ಕೂ ಎರಡು ವಾರಗಳ ಹಿಂದೆಯೂ ಇದೇ ರೀತಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. 19 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿತ್ತು. ರಾಷ್ಟ್ರ ರಾಜಧಾನಿ ಕಾಠ್ಮಂಡುವಿನಲ್ಲಿರುವ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಶೌರ್ಯ ವಿಮಾನಯಾನ ಸಂಸ್ಥೆ ವಿಮಾನ ಪತನ(Plane Crash)ಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದರು ಎಂದು ಮೂಲಗಳು ವರದಿ ಮಾಡಿದ್ದವು.

Exit mobile version