Site icon Vistara News

Robot | ಟಾಯ್ಲೆಟ್‌ನಲ್ಲಿದ್ದ ಯುವತಿಯ ಫೋಟೋ ತೆಗೆದ ರೋಬೋಟ್! ಫೇಸ್‌ಬುಕ್‌ನಲ್ಲಿ ವೈರಲ್‌ ಆಯ್ತು ಚಿತ್ರ

ಕ್ಯಾಲಿಫೋರ್ನಿಯಾ: ತಂತ್ರಜ್ಞಾನ ಬದುಕನ್ನು ಸುಲಭ ಮಾಡುತ್ತದೆ. ಆದರೆ ಅದೇ ತಂತ್ರಜ್ಞಾನ ಕೆಲವೊಮ್ಮೆ ನಮ್ಮ ಜೀವಕ್ಕೂ ತೊಂದರೆಯನ್ನುಂಟು ಮಾಡಿಬಿಡಬಹುದು. ಮನೆಯನ್ನು ಸ್ವಚ್ಛ ಮಾಡುವುದಕ್ಕೆಂದು ತಂದಿದ್ದ ರೋಬೋಟ್‌ (Robot) ಒಂದು ಮನೆಯ ಯುವತಿ ಶೌಚಾಲಯದಲ್ಲಿರುವ ಫೋಟೋವನ್ನೇ ತೆಗೆದು, ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Lifebouy Robot | ಬೀಚ್‌ಗಳಲ್ಲಿ ಮುಳುಗುವವರ ರಕ್ಷಣೆಗೆ ಬರಲಿದೆ ರೋಬೋಟ್‌, ಹೇಗಿದರ ಕಾರ್ಯ?

ಅಮೆರಿಕದ ಮ್ಯಾಸಚೂಸೆಟ್ಸ್ ಮೂಲದ ಸಂಸ್ಥೆಯಾಗಿರುವ ಐರೊಬೋಟ್ (iRobot) 2020ರಲ್ಲಿ ರೂಂಬಾ (Roomba) ಹೆಸರಿನ ವಾಕ್ಯೂಮ್‌ ಕ್ಲೀನಿಂಗ್‌ ರೋಬೋಟ್‌ ಅನ್ನು ತಯಾರಿಸಿದೆ. ಈ ರೋಬೋಟ್‌ನ ಪರೀಕ್ಷೆ ಮಾಡುವುದಕ್ಕಾಗಿ ಒಂದಿಷ್ಟು ಸ್ವಯಂಸೇವಕರನ್ನು ಒಟ್ಟು ಮಾಡಿ, ಅವರ ಮನೆಗೆ ರೋಬೋಟ್‌ ಕಳುಹಿಸಿಕೊಡಲಾಗಿದೆ. ಅದನ್ನು ಬಳಸುವುದಕ್ಕೆ ಅವರಿಗೆ ಹಣವನ್ನೂ ಕೊಡಲಾಗಿದೆ.
ಈ ರೀತಿ ಯುವತಿಯೊಬ್ಬರ ಮನೆಯಲ್ಲಿ ಪರೀಕ್ಷೆಗೆಂದು ತರಲಾಗಿದ್ದ ರೂಂಬಾ ಆ ಯುವತಿ ಶೌಚಾಲಯದಲ್ಲಿದ್ದಾಗ ಆಕೆಯ ಫೋಟೋ ತೆಗೆದಿದೆ. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ, ವೈರಲ್‌ ಆಗಿದೆ.

ಇದನ್ನೂ ಓದಿ: ಪುಸ್ತಕಗಳು ಮನುಕುಲ ಉಳಿಸಿಕೊಳ್ಳುವ ಜ್ಞಾನನಿಧಿಗಳು: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಐರೋಬೋಟ್‌ ಸಂಸ್ಥೆಯು ರೂಂಬಾ ರೋಬೋಟ್‌ಗೆ ವಸ್ತುಗಳ ಬಗ್ಗೆ ಜ್ಞಾನ ತುಂಬುವಂತೆ ಮಾಡುವುದಕ್ಕೆ ಸ್ಯಾನ್‌ಫ್ರಾನ್ಸಿಸ್ಕೋದ ಸ್ಕೇಲ್‌ ಎಐ ಹೆಸರಿನ ಸಂಸ್ಥೆಗೆ ಗುತ್ತಿಗೆಯನ್ನು ನೀಡಿತ್ತು. ಆ ಸಂಸ್ಥೆಯು ವೆನೆಜುವೆಲಾದಲ್ಲಿರುವ ಗುತ್ತಿಗೆ ಕೆಲಸಗಾರರಿಂದ ಆ ಕೆಲಸವನ್ನು ಮಾಡಿಸಿಕೊಂಡಿದೆ. ಪರೀಕ್ಷಾ ಹಂತದಲ್ಲಿದ್ದ ರೂಂಬಾ ಫೋಟೋಗಳನ್ನು ತೆಗೆದು ಸ್ಕೇಲ್‌ಗೆ ಕಳುಹಿಸಿದರೆ ಅವರು ಅದನ್ನು ಗುತ್ತಿಗೆ ಕೆಲಸಗಾರರಿಗೆ ನೀಡಿದ್ದಾರೆ. ಅಲ್ಲಿಂದ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾಗಿರುವುದಾಗಿ ಹೇಳಲಾಗಿದೆ.

ಈ ಘಟನೆಯ ಬಗ್ಗೆ ಐರೋಬೋಟ್‌ ಸಂಸ್ಥೆ ತನಿಖೆ ನಡೆಸುತ್ತಿದೆ. ಮತ್ತೊಮ್ಮೆ ರೂಂಬಾ ತಂತ್ರಜ್ಞಾನದಲ್ಲಿ ಪರಿಷ್ಕರಣೆಯನ್ನು ಮಾಡಿದ್ದು, ಅದನ್ನು ಅಮೆಜಾನ್‌ ಮೂಲಕ ಮಾರಾಟ ಮಾಡುವುದಕ್ಕೂ ಸಂಸ್ಥೆ ಸಿದ್ಧವಾಗಿದೆ.

Exit mobile version