ಲಂಡನ್/ಜೆರುಸಲೇಂ: ಹಮಾಸ್ ಉಗ್ರರ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ, ಹಮಾಸ್ ಉಗ್ರರನ್ನು ಭೂಮಿಯ ಮೇಲೆಯೇ ಇಲ್ಲದಂತೆ ಮಾಡುವ ನಿರ್ಧಾರ ತೆಗೆದುಕೊಂಡಿರುವ ಇಸ್ರೇಲ್‌ಗೆ (Israel Palestine War) ಭಾರತ ಸೇರಿ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಅದರಲ್ಲೂ, ಅಮೆರಿಕ (America) ಶಸ್ತ್ರಾಸ್ತ್ರಗಳ ನೆರವಿನ ಮೂಲಕ ಉಗ್ರರ ನಿರ್ನಾಮಕ್ಕೆ ಸಹಕಾರ ನೀಡಿದೆ. ಇದರ ಬೆನ್ನಲ್ಲೇ, ಬ್ರಿಟನ್ ಕೂಡ ನೌಕೆಗಳು ಹಾಗೂ ಯುದ್ಧವಿಮಾನಗಳ ನೆರವಿನ ಮೂಲಕ ಇಸ್ರೇಲ್ ಪರ ನಿಂತಿದೆ.
ಸಮರಪೀಡಿತ ಇಸ್ರೇಲ್‌ಗೆ ನೆರವಾಗಲಿ ಎಂದು ಬ್ರಿಟನ್ ಸರ್ಕಾರವು ಮೆಡಿಟೇರಿಯನ್ ಸಮುದ್ರದಲ್ಲಿ ರಾಯಲ್ ನೇವಿಯ ಎರಡು ನೌಕೆಗಳನ್ನು ನಿಯೋಜಿಸಲು ತೀರ್ಮಾನಿಸಿದೆ. ಇಸ್ರೇಲ್‌ಗೆ ಮಾನವೀಯ ನೆರವು ಹಾಗೂ ಮೆಡಿಟೇರಿಯನ್ ಸಮುದ್ರದಲ್ಲಿ ಶತ್ರುಗಳ ಮೇಲೆ ನಿಗಾ ಇರಿಸುವ ದಿಸೆಯಲ್ಲಿ ಅನುಕೂವಾಗಲಿ ಎಂದು ಶೀಘ್ರದಲ್ಲೇ ನೌಕೆಗಳನ್ನು ನಿಯೋಜಿಸಲಾಗುತ್ತದೆ ಎಂದು ತಿಳಿದುಬಂದಿದೆ.
UK Prime Minister Rishi Sunak announces Royal Navy deployment to eastern Mediterranean in support of Israel. Includes P8 aircraft, two Royal Navy ships, and Royal Marines. Aimed at ensuring regional stability and preventing further escalation in Israel-Gaza conflict. pic.twitter.com/ybndQ2kRUk
— Hallock Inc. (@HallockInc) October 12, 2023
ಯುದ್ಧವಿಮಾನದ ನೆರವು
ಅಷ್ಟೇ ಅಲ್ಲ, ಪಿ8 ಯುದ್ಧವಿಮಾನದ ನೆರವನ್ನೂ ಇಸ್ರೇಲ್‌ಗೆ ಬ್ರಿಟನ್ ಒದಗಿಸುತ್ತಿದೆ. ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು, ಗಸ್ತು ತಿರುಗಲು, ಉಗ್ರರಿಗೆ ಶಸ್ತ್ರಾಸ್ತ್ರಗಳ ಸಾಗಣೆ ಮಾಡಲಾಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಯುದ್ಧವಿಮಾನ ನೆರವಾಗಲಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಈ ಕುರಿತು ಮಾತನಾಡಿದ್ದು, “ಒಂದು ವಾರದಲ್ಲಿ ನಡೆದ ಘಟನೆಗಳು ಮನುಕುಲಕ್ಕೆ ಅಪಾಯಕಾರಿಯಾಗಿವೆ. ಜಗತ್ತಿನ ಅತ್ಯಾಧುನಿಕ ನೌಕೆ, ಯುದ್ಧವಿಮಾನಗಳನ್ನು ನಿಯೋಜಿಸಿ ಶಾಂತಿ ಹಾಗೂ ಸ್ಥಿರತೆ ಕಾಪಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದಿದ್ದಾರೆ.
ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ಜತೆ ಪೂರ್ಣ ಪ್ರಮಾಣದಲ್ಲಿ ಯುದ್ಧ ಸಾರಿರುವ ಇಸ್ರೇಲ್‌ಗೆ ಅಮೆರಿಕ ಈಗಾಗಲೇ ಬೆಂಬಲ ನೀಡಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಅಮೆರಿಕವು ಇಸ್ರೇಲ್‌ಗೆ ಕಳುಹಿಸಿಕೊಟ್ಟಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Israel Palestine War: ಬಾಯ್ತೆರೆದ ಹೊಟ್ಟೆ, ಕಂದಮ್ಮಗಳ ಶವಗಳು; ಇಸ್ರೇಲಿಗರ ಸ್ಥಿತಿ ಶತ್ರುಗೂ ಬೇಡ!
ಮತ್ತೊಂದೆಡೆ, ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ನಾಗರಿಕರು ತತ್ತರಿಸಿರುವ ಕಾರಣ ಗಾಜಾಪಟ್ಟಿಯ ಮೇಲೆ ಶುಕ್ರವಾರ ಇಸ್ರೇಲ್ ಸೇನೆಯು ದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, 24 ಗಂಟೆಯಲ್ಲಿಯೇ ಲಕ್ಷಾಂತರ ನಾಗರಿಕರು ಸ್ಥಳಾಂತರಗೊಳ್ಳಿ ಎಂಬುದಾಗಿ ಇಸ್ರೇಲ್ ಸೂಚನೆ ನೀಡಿರುವುದು ದಾಳಿಯ ತೀವ್ರತೆಯನ್ನು ಅಂದಾಜಿಸಬಹುದಾಗಿದೆ. ಆದರೆ, ಇದುವರೆಗೆ ಗಾಜಾದಿಂದ ಯಾವುದೇ ನಾಗರಿಕರನ್ನು ಸ್ಥಳಾಂತರ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.