ಮಾಸ್ಕೋ: ರಷ್ಯಾ (Russia) ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಂದುವರಿಯುತ್ತಿದೆ. ಹೀಗಿರುವಾಗ ಈ ಯುದ್ಧದ ಬಗ್ಗೆ ಯುರೋಪ್‌ನ ಹಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವೆನಿಸಿಕೊಂಡಿರುವುದು ʼಮೆಡುಜಾʼ ಮಾಧ್ಯಮ ಸಂಸ್ಥೆ. ಇದೀಗ ರಷ್ಯಾ ಈ ಸಂಸ್ಥೆಯನ್ನೇ ನಿಷೇಧಿಸಿ ಘೋಷಣೆ ಹೊರಡಿಸಿದೆ.
ಯುರೋಪ್‌ನ ಲಾಟ್ವಿಯಾ ಮೂಲದ ಸಂಸ್ಥೆಯಾಗಿರುವ ʼಮೆಡುಜಾʼ ರಷ್ಯಾದ ಸಾಂವಿಧಾನಿಕ ಆದೇಶ ಮತ್ತು ರಷ್ಯಾ ಒಕ್ಕೂಟದ ಭದ್ರತೆಗೆ ಬೆದರಿಕೆ ಹಾಕುತ್ತಿದೆ ಎಂದು ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಹೇಳಿದ್ದಾರೆ. ಮೆಡುಜಾವನ್ನು ಅನಪೇಕ್ಷಿತ ಸಂಸ್ಥೆ ಎಂದು ಹೆಸರಿಸಲಾಗಿದ್ದು, ರಷ್ಯಾದ್ಯಂತ ಅದಕ್ಕೆ ನಿಷೇಧ ಹೇರಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ನಾಯಕರ ನಡುವೆ ಶಾಂತಿ ಮಾತುಕತೆ ಸಾಧ್ಯವಾಗಿಸಲು ಭಾರತದ ಪ್ರಧಾನಿಯಿಂದ ಮಾತ್ರ ಸಾಧ್ಯ ಎಂದ ಫ್ರೆಂಚ್ ಪತ್ರಕರ್ತೆ
ಯಾವುದೇ ಕಾರಣಕ್ಕೂ ಯಾರೊಬ್ಬರೂ ಈ ಮೆಡುಜಾ ಮಾಧ್ಯಮ ಸಂಸ್ಥೆಗೆ ಸಹಾಯ ಮಾಡುವಂತಿಲ್ಲ. ಅದರ ಹೈಪರ್‌ಲಿಂಕ್ ಇರುವಂತಹ ಲಿಂಕ್‌ಗಳನ್ನು ತೆರೆಯುವಂತೆಯೂ ಇಲ್ಲ ಎಂದು ಕಟ್ಟೆಚ್ಚರವನ್ನು ರಷ್ಯಾ ನೀಡಿದೆ. ಒಂದು ವೇಳೆ ಈ ನಿಯಮವನ್ನು ಮೀರಿದರೆ ಅಂಥವರಿಗೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು ಎಂದೂ ಎಚ್ಚರಿಸಲಾಗಿದೆ.
ಈ ವಿಚಾರವಾಗಿ ಮೆಡುಜಾ ಸಂಸ್ಥೆ ಪ್ರತಿಕ್ರಿಯಿಸಿದ್ದು, “ರಷ್ಯಾದ ಈ ನಿಲುವು ನಮಗೇನೂ ಹೆದರಿಕೆ ತಂದಿಲ್ಲ. ಆದರೆ ನಮಗೆ ನಮ್ಮ ಓದುಗರ ಬಗ್ಗೆ ಭಯವಿದೆ. ಮೆಡುಜಾದೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿದ ಜನರಿಗಾಗಿ ನಾವು ಭಯಪಡುತ್ತೇವೆ. ಅದೇನೇ ಇದ್ದರೂ, ನಾವು ಮಾಡುವ ಕೆಲಸವನ್ನು ನಾವು ನಂಬುತ್ತೇವೆ. ನಾವು ವಾಕ್ ಸ್ವಾತಂತ್ರ್ಯವನ್ನು ನಂಬುತ್ತೇವೆ. ನಾವು ಪ್ರಜಾಸತ್ತಾತ್ಮಕ ರಷ್ಯಾವನ್ನು ನಂಬುತ್ತೇವೆ” ಎಂದು ಹೇಳಿದೆ.