Site icon Vistara News

Ryan O’Neal: ʼಲವ್‌ ಸ್ಟೋರಿʼ ಖ್ಯಾತಿಯ ಹಾಲಿವುಡ್‌ ನಟ ರಿಯಾನ್‌ ಒ ನೀಲ್‌ ನಿಧನ

Ryan ONeal

Ryan ONeal

ನ್ಯೂಯಾರ್ಕ್‌: ಹಾಲಿವುಡ್‌ ನಟ, ʼಲವ್‌ ಸ್ಟೋರಿʼ, ʼಪೇಪರ್‌ ಮೂನ್‌ʼ ಚಿತ್ರಗಳ ಖ್ಯಾತಿಯ ರಿಯಾನ್‌ ಒ ನೀಲ್‌ (Ryan O’Neal) ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದರು ಎಂದು ಮೂಲಗಳು ತಿಳಿಸಿವೆ.

1941ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಜನಿಸಿದ ರಿಯಾನ್‌ ಒ ನಿಲ್‌ ಆರಂಭದಲ್ಲಿ ಬಾಕ್ಸರ್‌ ಆಗಿದ್ದರು. 1960ರಲ್ಲಿ ಅವರು ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ʼದಿ ಮೆನಿ ಲವ್ಸ್‌ ಆಫ್‌ ಡೋಬಿ ಗಿಲ್ಲಿಸ್‌ʼ ಎನ್ನುವ ಟಿವಿ ಶೋ ಮೂಲಕ ರಿಯಾನ್‌ ಒ ನಿಲ್‌ ಬಣ್ಣದ ಪ್ರಪಂಚ ಪ್ರವೇಶಿಸಿದರು. 1969ರಲ್ಲಿ ತೆರೆಕಂಡ ʼದಿ ಬಿಗ್‌ ಬೌನ್ಸ್‌ʼ ರಿಯಾನ್‌ ಒ ನಿಲ್‌ ಅಭಿನಯಿಸಿದ ಮೊದಲ ಚಿತ್ರ.

1964ರ ಎಬಿಸಿ ಪ್ರೈಮ್‌ ಟೈಮ್‌ ಟೆಲಿವಿಷನ್‌ ಧಾರಾವಾಹಿ ʼಪೇಟನ್‌ ಪ್ಲೇಸ್‌ʼನಲ್ಲಿ ರಾಡ್ನಿ ಹ್ಯಾರಿಂಗ್ಟನ್‌ ಪಾತ್ರವನ್ನು ನಿರ್ವಹಿಸುವ ಮೂಲಕ ಜನಪ್ರಿಯರಾದರು. ಇನ್ನು 1970ರಲ್ಲಿ ತೆರೆಕಂಡ ರೊಮ್ಯಾಂಟಿಕ್‌ ಡ್ರಾಮಾ ʼಲವ್‌ ಸ್ಟೋರಿʼ ಚಿತ್ರದ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ಎರಿಕ್‌ ಸೆಗಲ್‌ ಅವರ ಅದೇ ಶೀರ್ಷಿಕೆಯ ಕಾದಂಬರಿ ಆಧಾರಿತ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 2015ರಲ್ಲಿ ಬಿಡುಗಡೆಯಾದ ʼಯೂನಿಟ್‌ʼ ಮತ್ತು ʼನೈಟ್‌ ಆಫ್‌ ಕಪ್ಸ್‌ʼ ರಿಯಾನ್‌ ಒ ನಿಲ್‌ ಅಭಿನಯಿಸಿದ ಕೊನೆಯ ಚಿತ್ರಗಳು. ರಿಯಾನ್‌ ಒ ನಿಲ್‌ ಆಸ್ಕರ್‌ ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿದ್ದರು. ಅವರು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ: Actress Leelavathi: ನೆಲಮಂಗಲದಲ್ಲಿ ನಟಿ ಲೀಲಾವತಿ ಅಂತಿಮ ದರ್ಶನ, ರವೀಂದ್ರ ಕಲಾಕ್ಷೇತ್ರದಲ್ಲಿ 11 ಗಂಟೆಯಿಂದ ಅವಕಾಶ

Exit mobile version