Site icon Vistara News

ಹಲ್ಲೆಗೆ ಒಳಗಾದ ಬರಹಗಾರ ಸಲ್ಮಾನ್‌ ರಶ್ದಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ

ನ್ಯೂ ಯಾರ್ಕ್: ಭಾರತ ಮೂಲದ ಖ್ಯಾತ ಲೇಖಕ, ಕಾದಂಬರಿಕಾರ ಸಲ್ಮಾನ್‌ ರಶ್ದಿ ಮೇಲೆ ಶುಕ್ರವಾರ (ಆಗಸ್ಟ್‌ 12) ಸಂಜೆ ಹಲ್ಲೆ ನಡೆದಿದ್ದು, ಕೂಡಲೆ ಏರ್‌ಲಿಫ್ಟ್‌ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು ಸದ್ಯ ರಶ್ದಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಅವರು ತಮ್ಮ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರ ಏಜೆಂಟ್‌ ಆಂಡ್ರ್ಯೂ ವೈಲಿ ತಿಳಿಸಿದ್ದಾರೆ.

ಸಲ್ಮಾನ್‌ ಕಣ್ಣು ಕಳೆದುಕೊಳ್ಳುವ ಸಾಧ್ಯತೆ

ತೀವ್ರವಾಗಿ ಹಲ್ಲೆಗೆ ಒಳಗಾದ ಸಲ್ಮಾನ್‌ ರಶ್ದಿ ಅವರು ತಮ್ಮ ಒಂದು ಕಣ್ಣು ಕಳೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅವರ ತೋಳಿನ ನರಗಳು ಕತ್ತರಿಸಲ್ಪಟ್ಟಿವೆ. ಲಿವರ್ ಕೂಡ ಹಾನಿಗೆ ಒಳಗಾಗಿರಬಹುದು ಎಂಬ ವಿಷಯವನ್ನು ಅವರ ಏಜೆಂಟ್‌ ತಿಳಿಸಿದ್ದಾರೆ.

ಸಲ್ಮಾನ್‌ ರಶ್ದಿ ಅವರ ಬರಹದಿಂದ ಇರಾನ್‌ ಹಾಗೂ ಶಿಯಾ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರಿಗೆ ಜೀವ ಬೆದರಿಕೆಯೂ ಇತ್ತು. ಹೀಗಾಗಿ ಅನೇಕ ವರ್ಷಗಳಿಂದ ಸಲ್ಮಾನ್‌ ತಲೆಮರೆಸಿಕೊಂಡಿದ್ದರು. ನ್ಯೂಯಾರ್ಕ್‌ನಲ್ಲಿ ಭಾಷಣ ನೀಡುತ್ತಿದ್ದ ಸಂದರ್ಭ ದುಷ್ಕರ್ಮಿಯೊಬ್ಬ ವೇದಿಕೆಯಲ್ಲಿ ಸಲ್ಮಾನ್‌ ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ಈ ಕೃತ್ಯಕ್ಕೆ ವಿಶ್ವದ ಅನೇಕ ಸಾಹಿತಿಗಳು ಹಾಗೂ ರಾಜಕಾರಣಿಗಳು ವಿರೋಧ ವ್ಯಕ್ತ ಪಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದಿದ್ದಾರೆ.

ಹೇಗಾಯಿತು ಈ ಹಲ್ಲೆ?

75 ವರ್ಷದ ಹಿರಿಯ ಬರಹಗಾರ ಸಲ್ಮಾನ್‌ ರಶ್ದಿ ಅವರಿಗೆ 1980ರ ದಶಕದಿಂದಲೂ ಜೀವ ಬೆದರಿಕೆಯಿತ್ತು. ಶುಕ್ರವಾರ (ಆಗಸ್ಟ್‌ 12) ಸಂಜೆ ನ್ಯೂಯಾರ್ಕ್‌ನ ಚಟಾಕ್ವಾ ವಿದ್ಯಾಲಯದ ನೂರಾರು ಪ್ರೇಕ್ಷಕರ ಸಮ್ಮುಖದಲ್ಲಿ ಸಲ್ಮಾನ್‌ ಕಲಾ ಸ್ವಾತಂತ್ರ್ಯದ ವಿಷಯವಾಗಿ ಭಾಷಣಕ್ಕೆ ವೇದಿಕೆ ಮೇಲೆ ಹೋದಾಗ, ಮುಸುಕಿನ ವ್ಯಕ್ತಿ ವೇದಿಕೆಗೆ ಧಾವಿಸಿ ಸಲ್ಮಾನ್‌ ಮೇಲೆ ಹಲ್ಲೆ ಮಾಡಿದ.

ಕಣ್ಣೆದುರೇ ನಡೆದ ಈ ಹಲ್ಲೆ ಪ್ರೇಕ್ಷಕರನ್ನು ಸ್ತಬ್ಧವಾಗಿಸಿತು. ಪ್ರೇಕ್ಷಕರು ಕೂಡಲೆ ವೇದಿಕೆಗೆ ಧಾವಿಸಿ ಸಲ್ಮಾನ್‌ ಅವರನ್ನು ರಕ್ಷಿಸಲು ಮುಂದಾದರು. ನ್ಯೂಯಾರ್ಕ್‌ ಪೊಲೀಸರು ಕೂಡಲೆ ಕ್ರಮ ಕೈಗೊಂಡು ದಾಳಿ ನಡೆಸಿದವನನ್ನು ಬಂಧಿಸಿದರು. ದಾಳಿ ನಡೆಸಿದವನನ್ನು ಹದಿ ಮಾಟರ್‌ (24) ಎಂದು ಗುರುತಿಸಲಾಗಿದೆ.

ಈ ಘಟನೆ ಪ್ರೇಕ್ಷಕರನ್ನು ಗೊಂದಲದಲ್ಲಿ ಕೆಡವಿತು. ಗಾಬರಿಗೊಂಡಿದ್ದ ಪ್ರೇಕ್ಷಕರ ಕೂಗು ಸಭಾಂಗಣವನ್ನು ಆವರಿಸಿತು. ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಓರ್ವ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಈ ಕಾರ್ಯಕ್ರಮದ ವ್ಯವಸ್ಥಾಪಕರಾದ ಹೆನ್ರಿ ರೀಸ್‌ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸಲ್ಮಾನ್‌ ರಶ್ದಿ ಅವರಿಗೆ ಇದ್ದ ಬೆದರಿಕೆ ಏನು?

ಸಲ್ಮಾನ್‌ ರಶ್ದಿ ಮೂಲತಃ ಭಾರತದವರು. ಮುಸ್ಲಿಂ ಕಾಶ್ಮೀರಿ ಕುಟುಂಬದಲ್ಲಿ ಜನಿಸಿದವರು. ನಂತರ ಇವರು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ನೆಲೆನಿಂತರು. ಸಲ್ಮಾನ್‌ ಬರೆದ ನಾಲ್ಕನೇ ಕಾದಂಬರಿಯಾದ ʼThe Satanic Versesʼ ಕೃತಿಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಬರೆಯಲಾಗಿದೆ ಎಂದು ಕೆಲ ಮುಸ್ಲಿಮರು ಆರೋಪಿಸಿದ್ದರು. 1988ರಲ್ಲಿ ಪ್ರಕಟವಾಗಿದ್ದ ಈ ಕೃತಿಯನ್ನು ಕೆಲವು ಮುಸ್ಲಿಂ ದೇಶಗಳಲ್ಲಿ ಬ್ಯಾನ್‌ ಕೂಡ ಮಾಡಲಾಗಿತ್ತು. ಇರಾನ್‌ ದೇಶದ ಮುಸ್ಲಿಂ ಮುಖಂಡ ಅಯತೊಲ್ಲಾ ರುಹೊಲ್ಲಾ ಖೊಮೆನಿ ಅವರು ರಶ್ದಿಯನ್ನು ಹತ್ಯೆ ಮಾಡುವವರಿಗೆ ಹಣ ನೀಡುವುದಾಗಿ ʼಫತ್ವಾʼ ಹೊರಡಿಸಿದರು.

ಇದಾದ ಬಳಿಕ ರಶ್ದಿ ಅನೇಕ ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಜೀವನ ಸಾಗಿಸುತ್ತಿದ್ದರು. ಇರಾನ್‌ ಸರ್ಕಾರವು 1998ರಲ್ಲಿ ಫತ್ವಾವನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಹೇಳಿತು. ಹೀಗಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಸಲ್ಮಾನ್‌ ಸಾರ್ವಜನಿಕವಾಗಿ ಓಡಾಡಲು ಶುರು ಮಾಡಿದ್ದರು. ಆದರೆ ಅಯತೊಲ್ಲಾ ಖೊಮೆನಿ ಉತ್ತರಾಧಿಕಾರಿಯಾಗಿದ್ದ ಆಯತೊಲ್ಲ ಅಲಿ ಖಮೇನಿ 2019ರಲ್ಲಿ ಫತ್ವಾವನ್ನು ಹಿಂಪಡೆಯಲಾಗುವುದಿಲ್ಲ ಎಂದು ಘೋಷಿಸಿದ್ದರು.‌

ಇದನ್ನೂ ಓದಿ | ಸಲ್ಮಾನ್‌ ರಶ್ದಿ ಮೇಲೆ ದಾಳಿ ನಡೆಸಿದವನು ಯಾರು?

Exit mobile version