Site icon Vistara News

Sam Altman: ಮೈಕ್ರೋಸಾಫ್ಟ್‌ ಸೇರಲಿದ್ದಾರೆ ಓಪನ್‌ಎಐ ನಿರ್ಗಮಿತ ಸಿಇಒ ಸ್ಯಾಮ್‌ ಆಲ್ಟ್‌ಮ್ಯಾನ್‌

Sam Altman opeAI

ವಾಷಿಂಗ್ಟನ್‌: ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ ಸಿಇಒ ಸ್ಥಾನದಿಂದ ವಜಾಗೊಂಡ ಬೆನ್ನಲ್ಲೇ ಸ್ಯಾಮ್‌ ಆಲ್ಟ್‌ಮ್ಯಾನ್‌ (Sam Altman) ಅವರಿಗೆ ಭರ್ಜರಿ ಆಫರ್‌ ಬಂದಿದೆ. ಜಾಗತಿಕ ಐಟಿ ಕಂಪನಿಯಾದ ಮೈಕ್ರೋಸಾಫ್ಟ್‌ನಿಂದ ಸ್ಯಾಮ್‌ ಆಲ್ಟ್‌ಮ್ಯಾನ್‌ ಅವರಿಗೆ ಆಫರ್‌ ಬಂದಿದೆ. ಹಾಗೆಯೇ, ಶೀಘ್ರದಲ್ಲೇ ಸ್ಯಾಮ್‌ ಆಲ್ಟ್‌ಮ್ಯಾನ್‌ ಅವರು ಮೈಕ್ರೋಸಾಫ್ಟ್‌ ಸೇರಲಿದ್ದಾರೆ ಎಂದು ಸಿಇಒ ಸತ್ಯ ನಾಡೆಲ್ಲಾ (Satya Nadella) ಘೋಷಿಸಿದ್ದಾರೆ.

“ನಾವು ಓಪನ್‌ಎಐ ಜತೆ ಸಹಭಾಗಿತ್ವ ಮುಂದುವರಿಯಲು ಬಯಸುತ್ತೇವೆ. ಮೈಕ್ರೋಸಾಫ್ಟ್‌ ಕಂಪನಿಯು ನಾವೀನ್ಯತೆಯನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿರುತ್ತದೆ. ಅಷ್ಟೇ ಅಲ್ಲ. ಸ್ಯಾಮ್‌ ಆಲ್ಟ್‌ಮ್ಯಾನ್‌ ಹಾಗೂ ಗ್ರೆಗ್‌ ಬ್ರಾಕ್‌ಮ್ಯಾನ್‌ ಅವರು ಮೈಕ್ರೋಸಾಫ್ಟ್‌ ಕಂಪನಿ ಸೇರಲಿದ್ದಾರೆ. ಕೃತಕ ಬುದ್ಧಿಮತ್ತೆ ಸಂಶೋಧನಾ ತಂಡದಲ್ಲಿ ಅವರು ಭಾಗಿಯಾಗಲಿದ್ದಾರೆ. ಇದರೊಂದಿಗೆ ನಮ್ಮ ತಂಡ, ಸಂಪನ್ಮೂಲವು ವಿಸ್ತಾರವಾಗುತ್ತಿದೆ” ಎಂದು ಸತ್ಯ ನಾಡೆಲ್ಲಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಆದಾಗ್ಯೂ, ಗ್ರೆಗ್‌ ಬ್ರಾಕ್‌ಮ್ಯಾನ್‌ ಕೂಡ ಓಪನ್‌ಎಐನಿಂದ ಹೊರಬಂದಿದ್ದರು.

ಓಪನ್‌ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಕಳೆದ ವಾರ ಆಡಳಿತ ಮಂಡಳಿ ಸಂಸ್ಥೆಯಿಂದ ಹೊರಹಾಕಿದೆ. 38 ವರ್ಷದ ಆಲ್ಟ್‌ಮ್ಯಾನ್ ಒಂದು ವರ್ಷದ ಹಿಂದೆ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ʼಚಾಟ್‌ಜಿಪಿಟಿʼಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದು ಅಭೂತಪೂರ್ವ ಜನಪ್ರಿಯತೆ ಗಳಿಸಿ ಮನೆಮಾತಾಗಿತ್ತು.

ಇದನ್ನೂ ಓದಿ: Mira Murati: 34 ವರ್ಷದ ಹಾಲ್ಗೆನ್ನೆ ಚೆಲುವೆ ಮೀರಾ ಮುರತಿ ಈಗ ಓಪನ್‌ಎಐ ಸಿಇಒ; ಯಾರಿವರು?

ಮತ್ತೊಂದು ಬೆಳವಣಿಗೆಯಲ್ಲಿ, ಓಪನ್‌ಎಐಯ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್‌ಮ್ಯಾನ್‌ ಅವರು ಕೂಡ ಸಂಸ್ಥೆಯಿಂದ ತಾವು ನಿರ್ಗಮಿಸುವುದಾಗಿ ಪ್ರಕಟಿಸಿದ್ದರು. ಆಲ್ಟ್‌ಮ್ಯಾನ್‌ ಅವರ ಪದಚ್ಯುತಿಯ ನಂತರದ ಕೆಲವೇ ಗಂಟೆಗಳಲ್ಲಿ ಅವರ ಈ ನಿರ್ಧಾರ ಪ್ರಕಟವಾಗಿತ್ತು. “8 ವರ್ಷಗಳ ಹಿಂದೆ ನನ್ನ ಅಪಾರ್ಟ್‌ಮೆಂಟ್‌ನಲ್ಲಿ ಸಂಸ್ಥೆ ಪ್ರಾರಂಭವಾದಾಗಿನಿಂದ ನಾವೆಲ್ಲರೂ ಒಟ್ಟಾಗಿ ನಿರ್ಮಿಸಿದ ಈ ಉತ್ಪನ್ನದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾವು ಒಟ್ಟಿಗೆ ಉತ್ತಮ ಮತ್ತು ಕಠಿಣ ಸಮಯವನ್ನು ಎದುರಿಸಿದೆವು. ಇದನ್ನು ಸಾಧಿಸಿದ್ದೇವೆ. ಎಲ್ಲಾ ಕಾರಣಗಳ ಹೊರತಾಗಿಯೂ ಇನ್ನಷ್ಟು ಮುನ್ನಡೆ ಸಾಧ್ಯವಾಗಬೇಕಿತ್ತು. ಆದರೆ ಇಂದಿನ ಸುದ್ದಿಯ ಆಧಾರದ ಮೇಲೆ ನಾನು ಸಂಸ್ಥೆಯನ್ನು ತ್ಯಜಿಸಿದೆ” ಎಂದಿದ್ದರು.

Exit mobile version