Site icon Vistara News

Amir Sarfaraz: ಪಾಕ್ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ ಕೊಂದವನ ಹತ್ಯೆ; ಇದು ಯಾರ ಕೈವಾಡ?

Amir Sarfaraz

Sarabjit Singh's Daughter Suspects Pak Govt Behind Death Of Her Father's Killer Amir Sarfaraz

ಪಂಜಾಬ್/ಇಸ್ಲಾಮಾಬಾದ್:‌ ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ (Sarabjit Singh) ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ (Amir Sarfaraz) ಅಲಿಯಾಸ್ ತಾಂಬಾ (Tamba) ಎಂಬಾತನನ್ನು ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಭಾನುವಾರ (ಏಪ್ರಿಲ್‌ 14) ಗುಂಡಿಕ್ಕಿ ಕೊಂದಿದ್ದಾರೆ. ಇದರ ಬೆನ್ನಲ್ಲೇ, ಅಮೀರ್‌ ಸರ್ಫರಾಜ್‌ ಹತ್ಯೆಯ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡ ಇದೆ ಎಂಬುದಾಗಿ ಸರಬ್ಜಿತ್‌ ಸಿಂಗ್‌ ಅವರ ಪುತ್ರಿ ಸ್ವಪನ್‌ದೀಪ್‌ ಕೌರ್‌ (Swapandeep Kaur) ಹೇಳಿದ್ದಾರೆ.

ಪಂಜಾಬ್‌ನ ಜಲಂಧರ್‌ ನಿವಾಸಿಯಾಗಿರುವ ಸ್ವಪನ್‌ದೀಪ್‌ ಕೌರ್‌ ಅವರು ಅಮೀರ್‌ ಸರ್ಫರಾಜ್‌ ಹತ್ಯೆ ಕುರಿತು ಎಎನ್‌ಐ ಜತೆ ಮಾತನಾಡಿದ್ದಾರೆ. “ಜೈಲಿನಲ್ಲಿ ನನ್ನ ತಂದೆಯನ್ನು ಕೊಂದವರಲ್ಲಿ ಒಬ್ಬ ಹತ್ಯೆಗೀಡಾಗಿದ್ದಾನೆ. ಇದು ಆತನ ಕರ್ಮದ ಫಲ. ಆದರೆ, ಅಮೀರ್‌ ಸರ್ಫರಾಜ್‌ ಹತ್ಯೆ ಹಿಂದೆ ಪಾಕಿಸ್ತಾನ ಸರ್ಕಾರದ ಪಿತೂರಿ ಇದೆ ಎಂದು ಅನಿಸುತ್ತಿದೆ. ಅಮೀರ್‌ ಸರ್ಫರಾಜ್‌ಗೆ ಗೌಪ್ಯ ಮಾಹಿತಿ ಗೊತ್ತಿತ್ತು. ಇದು ಬಯಲಾಗಬಾರದು ಎಂದು ಪಾಕಿಸ್ತಾನ ಸರ್ಕಾರವೇ ಹತ್ಯೆಗೆ ಪಿತೂರಿ ನಡೆಸಿರಬಹುದು. ಮಾನವ ಹಕ್ಕುಗಳ ಮೇಲೆ ನಂಬಿಕೆಯೇ ಇರದ ದೇಶದಿಂದ ನಾವು ಇನ್ನೇನು ನಿರೀಕ್ಷಿಸಲು ಸಾಧ್ಯ” ಎಂದು ಸ್ವಪನ್‌ದೀಪ್‌ ಕೌರ್‌ ಹೇಳಿದ್ದಾರೆ.

ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಅಮೀರ್‌ ಸರ್ಫರಾಜ್‌ ಮೇಳೆ ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್ ಸರ್ಫರಾಜ್‌ನನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ತ್ವರಿತವಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ.

ಪಾಕಿಸ್ತಾನದ ಕೋಟ್ ಲಖ್ಪತ್ ಜೈಲಿನಲ್ಲಿದ್ದ (Kot Lakhpat Jail) ಸರಬ್ಜಿತ್ ಸಿಂಗ್ ಅವರ ಮೇಲೆ ಇಟ್ಟಿಗೆ, ಚೂಪಾದ ಲೋಹದ ಹಾಳೆಗಳು, ಕಬ್ಬಿಣದ ರಾಡ್‌ ಮತ್ತು ಬ್ಲೇಡ್‌ನಿಂದ ಹಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು 2013ರ ಮೇ 2ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ಅಮೀರ್ ಸರ್ಫರಾಜ್ ಕೈವಾಡವಿದೆ ಎಂದು ಹೇಳಲಾಗಿತ್ತು.

ಗುಪ್ತಚರ ಆರೋಪದ ಮೇಲೆ ಬಂಧಿಯಾಗಿದ್ದ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಈ ಹಿಂದೆ ಭಾರತ ಧ್ವನಿ ಎತ್ತಿದ್ದರೂ ಪಾಕಿಸ್ತಾನ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇದೀಗ ಸುಮಾರು 11 ವರ್ಷಗಳ ಬಳಿಕ ಅಂಡರ್‌ವರ್ಲ್ಡ್ ಡಾನ್ ಅಮೀರ್ ಸರ್ಫರಾಜ್‌ನನ್ನು ಅಪರಿಚಿತ ವ್ಯಕ್ತಿಯೊಬ್ಬ ಹತ್ಯೆ ಮಾಡಿರುವುದು ಕುತೂಹಲ ಮೂಡಿಸಿದೆ. ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಂದು ಅಮೀರ್ ಸರ್ಫರಾಜ್ ಐಎಸ್‌ಐ ಸೂಚನೆಯ ಮೇರೆಗೆ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಿದ್ದ ಎನ್ನಲಾಗಿದೆ.

ರೈತನಾಗಿದ್ದ ಸರಬ್ಜಿತ್‌ ಸಿಂಗ್‌ 1990ರಲ್ಲಿ ಗೊತ್ತಿಲ್ಲದೆ ಗಡಿ ದಾಟಿ ಪಾಕಿಸ್ತಾನ ತಲುಪಿದ್ದರು. ಈ ವೇಳೆ ಪಾಕಿಸ್ತಾನದ ಸೇನೆ ಅವರನ್ನು ಬಂಧಿಸಿ ಭಯೋತ್ಪಾದನೆಯ ಆರೋಪ ಹೊರಿಸಿ ಜೈಲಿಗೆ ಕಳಿಸಿತ್ತು. ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅವರನ್ನು ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಇರಿಸಲಾಗತ್ತು. ಇವರನ್ನು ಕೊಲೆ ಮಾಡಲಾಗಿದ್ದರೂ ಪಾಕಿಸ್ತಾನ ಮಾತ್ರ ಬ್ರೈನ್‌ ಡೆಡ್‌ ಆಗಿ ಸರಬ್ಜಿತ್‌ ಮೃತಪಟ್ಟಿದ್ದಾರೆ ಎಂದೇ ವಾದಿಸಿತ್ತು. ಸರಬ್ಜಿತ್‌ ಸಿಂಗ್‌ ಬಿಡುಗಡೆಗಾಗಿ ಭಾರತ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ.

ಇದನ್ನೂ ಓದಿ: Amir Sarfaraz: ಪಾಕ್‌ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ವ್ಯಕ್ತಿ ಅಪರಿಚಿತರಿಂದ ಖತಂ!

Exit mobile version