ಇಸ್ತಾಂಬುಲ್: ಸೋಮವಾರ ಬೆಳಗಿನ ಜಾವ ಟರ್ಕಿಯಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪಕ್ಕೆ ಪ್ರಮುಖ ನಗರಗಳು ನೆಲಸಮವಾಗಿವೆ(Turkey Earthquake). ಹಾಗೆಯೇ ಸಂಜೆಯಲ್ಲಿ ಎರಡನೇ ಬಾರಿಗೆ 7.5 ತೀವ್ರತೆಯಷ್ಟು ಭೂಮಿ ಕಂಪಿಸಿದ್ದು, ಆಗ್ನೇಯ ಟರ್ಕಿ ಹೆಚ್ಚು ಬಾಧಿತವಾಗಿದೆ. ಒಟ್ಟಾರೆ ಈವರೆಗೆ ಮೃತಪಟ್ಟವರ ಸಂಖ್ಯೆ 1800 ದಾಟಿದೆ. ಭೂಕಂಪದ ತೀವ್ರತೆ ಸಿರಿಯಾಗೂ ತಟ್ಟಿದ್ದು, ಅಲ್ಲಿಯೂ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಜತೆಗೆ, ಕಂಪನದ ಅನುಭವ ಸೈಪ್ರಸ್ ಮತ್ತು ಈಜಿಪ್ಟ್‌ನಲ್ಲೂ ಆಗಿದೆ. ಇತ್ತೀಚಿನ ನೂರು ವರ್ಷಗಳಲ್ಲಿ ಟರ್ಕಿ ಕಂಡ ಅತಿ ದೊಡ್ಡ ಭೂಕಂಪ ಇದಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಸಂಪೂರ್ಣವಾಗಿ ನೆಲಸಮವಾಗಿವೆ. ಭೂಕಂಪಕ್ಕೆ ನಲುಗಿದ ಬಹುತೇಕ ನಗರಗಳಲ್ಲಿ, ಯುದ್ಧಪೀಡಿತ ಸಿರಿಯಾ ಹಾಗೂ ಇತರ ಸಂಘರ್ಷಪೀಡಿತ ಪ್ರದೇಶಗಳಿಂದ ಬಂದು ನೆಲೆಸಿದ ಜನರೇ ಬಲಿಯಾಗಿದ್ದಾರೆ. ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥ ರೇದ್ ಅಹ್ಮದ್ ಅವರು, ಇತ್ತೀಚಿನ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪ ಎಂದು ಸರ್ಕಾರಿ ರೆಡಿಯೋಗೆ ತಿಳಿಸಿದ್ದಾರೆ.
ಸಿರಿಯಾದಲ್ಲಿ 560 ಮಂದಿ ಮೃತ್ಯು
ಸರ್ಕಾರಿ ನಿಯಂತ್ರಣದಲ್ಲಿರುವ ಸಿರಿಯಾದಲ್ಲಿ ಭೂಕಂಪಕ್ಕೆ ಕನಿಷ್ಠ 560 ಜನರು ಬಲಿಯಾಗಿದ್ದಾರೆ. ಪ್ರೋ-ತುರ್ಕಿಸ್ ನಿಯಂತ್ರದಲ್ಲಿ ಸಿರಿಯಾದ ಉತ್ತರ ಭಾಗದಲ್ಲೂ ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Earthquake In Delhi | ದೆಹಲಿ, ಜಮ್ಮು ಕಾಶ್ಮೀರದಲ್ಲಿ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ
ಟರ್ಕಿಯಲ್ಲಿ ಕನಿಷ್ಠ 912 ಜನ ಸಾವು
ತೀವ್ರ ಬಾಧಿತವಾಗಿರುವ ಟರ್ಕಿಯಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚಿದೆ. ಈವರೆಗಿನ ವರದಿಗಳ ಪ್ರಕಾರ, ಟರ್ಕಿಯಲ್ಲಿ ಕನಿಷ್ಠ 912 ಜನರು ಮೃತಪಟ್ಟಿದ್ದಾರೆ. ಈ ವಿಷಯವನ್ನು ಉಪಾಧ್ಯಕ್ಷ ಫುಟ್ ಒಕ್ಟೇ ಅವರು ಖಚಿತಪಡಿಸಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ನಡೆದಿದೆ. ಚಳಿಗಾಲವಾದ್ದರಿಂದ ಬಹುತೇಕ ನಗರಗಳು, ರಸ್ತೆಗಳು ಹಿಮದಿಂದ ಆವರಿಸಿದೆ. ಇದರಿಂದಾಗಿ ಪರಿಹಾರ ಕಾರ್ಯಾಚರಣೆಗೂ ಭಾರೀ ಅಡಚಣೆಯಾಗುತ್ತಿದೆ ಎಂದು ತಿಳಿದು ಬಂದಿದೆ.