ಪಾಕಿಸ್ತಾನದಲ್ಲಿ ಹಿರಿಯ ವಕೀಲರೊಬ್ಬರ ಹತ್ಯೆಯಾಗಿದೆ. ಪಾಕ್ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಲತೀಫ್ ಅಫ್ರಿದಿಯವರನ್ನು, ದುಷ್ಕರ್ಮಿಗಳು ಪೇಶಾವರ ಹೈಕೋರ್ಟ್ನಲ್ಲಿಯೇ ಕೊಂದಿದ್ದಾರೆ. ಲತೀಫ್ ತಮ್ಮ ಸಹೋದ್ಯೋಗಿಗಳ ಜತೆ, ಹೈಕೋರ್ಟ್ನ ಬಾರ್ ರೂಂನಲ್ಲಿ ಕುಳಿತು, ಯಾವುದೋ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅಲ್ಲಿಗೇ ನುಗ್ಗಿದ ಬಂದೂಕುಧಾರಿಗಳು ವಕೀಲರತ್ತ ಗುಂಡು ಹಾರಿಸಿದ್ದಾರೆ.
ಗುಂಡೇಟು ತಿಂದು ರಕ್ತದ ಮಡುವಲ್ಲಿ ಬಿದ್ದಿದ್ದ ಲತೀಫ್ ಅಫ್ರಿದಿಯನ್ನು ಪೇಶಾವರ ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ತೀವ್ರವಾದ ರಕ್ತಸ್ರಾವ ಆಗಿದ್ದರಿಂದ, ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ.
ಲತೀಫ್ ಅಫ್ರಿದಿಯನ್ನೇ ಟಾರ್ಗೆಟ್ ಮಾಡಿ ದುಷ್ಕರ್ಮಿಗಳು ಗುಂಡು ಹೊಡೆದಿದ್ದಾರೆ. ಹೈಕೋರ್ಟ್ ಆವರಣಕ್ಕೆ ನುಗ್ಗಿದ ಇವರು ಮೊದಲು ಸುಮ್ಮನೆ ಅಲ್ಲಿದ್ದವರನ್ನು ಹೆದರಿಸಲು ಗುಂಡು ಹಾರಿಸಿದರು. ಬಳಿಕ ಲತೀಫ್ರಿಗೆ ಮೂರ್ನಾಲ್ಕು ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ, ದಾಳಿಕೋರರನ್ನು ಎಲ್ಲರನ್ನೂ ಬಂಧಿಸಲಾಗಿದೆ. ವಕೀಲರ ಶವವನ್ನು ಆ್ಯಂಬುಲೆನ್ಸ್ ಮೂಲಕ ಅವರ ಹಳ್ಳಿಗೆ ಸಾಗಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Viral Video | ಪಾಕಿಸ್ತಾನದಲ್ಲಿ ಆಹಾರ ಬಿಕ್ಕಟ್ಟಿನ ಕರಾಳತೆ; ಗೋಧಿ ಹಿಟ್ಟಿನ ಮೂಟೆಗಳಿರುವ ಲಾರಿಯನ್ನು ಬೆನ್ನಟ್ಟಿದ ಜನ