ಜಕಾರ್ತ್: ವಿವಾಹ ಪೂರ್ವ ಹಾಗೂ ವಿವಾಹೇತರ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸುವ ವಿಧೇಯಕಕ್ಕೆ ಇಂಡೋನೇಷ್ಯಾ (Indonesian Law) ಸಂಸತ್ತು ತನ್ನ ಒಪ್ಪಿಗೆಯನ್ನು ನೀಡಿದೆ. ಆದರೆ, ಜನರ ಸ್ವಾತಂತ್ರ್ಯವನ್ನು ಕಸಿಯುವ ಕಾನೂನು ಎಂದು ವಿರೋಧಿಗಳು ಟೀಕಿಸಿದ್ದಾರೆ. ಈ ಹಿಂದೆಯೇ ಇಂಥದೊಂದು ಕಾನೂನು ಜಾರಿಗೆ ಇಂಡೋನೇಷ್ಯಾ ಸರ್ಕಾರ ಮುಂದಾಗಿತ್ತು. ಆದರೆ, ಆಗ ಜನರು ತೀವ್ರ ಪ್ರತಿರೋಧ ತೋರಿದ್ದರಿಂದ ಹಿಂದೆ ಸರಿದಿತ್ತು.
ಎಲ್ಲ ಒಂಭತ್ತು ಪಕ್ಷಗಳು ಹೊಸ ಅಪರಾಧ ಸಂಹಿತೆಗೆ ತಮ್ಮ ಒಪ್ಪಿಗೆಯನ್ನು ನೀಡಿದ್ದರಿಂದ ಸಂಸತ್ತಿನ ಡೆಪ್ಯುಟಿ ಹೌಸ್ ಸ್ಪೀಕರ್ ಸುಫ್ಮಿ ದಾಸ್ಕೋ ಅಹ್ಮದ್ ಅವರು ಕಾನೂನನ್ನು ಅಂಗೀಕರಿಸಲಾಗಿದೆ ಎಂದು ಘೋಷಿಸಿದರು. ವಿವಾಹ ಪೂರ್ವ ಲೈಂಗಿಕ ಸಂಬಂಧವು ಅಪರಾಧವಾಗುವುದರಿಂದ ಲಿವ್ ಇನ್ ರಿಲೇಷನ್‌ಶಿಪ್ ಕೂಡ ಅಪರಾಧ ಎನಿಸಿಕೊಳ್ಳಲಿದೆ. ಜತೆಗೇ ವಿವಾಹವೇತರ ಅಕ್ರಮ ಸಂಬಂಧವೂ ಅಪರಾಧವಾಗಲಿದೆ. ಎಲ್‌ಜಿಬಿಟಿಕ್ಯೂ ಪ್ಲಸ್ ಸಮುದಾಯದ ಮೇಲೂ ಈ ಕಾನೂನು ಪರಿಣಾಮ ಬೀರಲಿದೆ.
ವಿವಾಹ ಪೂರ್ವ ಅಕ್ರಮ ಸಂಬಂಧ ಸಾಬೀತಾದರೆ ಗರಿಷ್ಠ ಆರು ತಿಂಗಳು ಮತ್ತು ವಿವಾಹೇತರ ಲೈಗಿಂಕ ಸಂಬಂಧವಿದ್ದರೆ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ವ್ಯಭಿಚಾರ ಆರೋಪಗಳು ಅವರ ಸಂಗಾತಿ, ಪೋಷಕರು ಅಥವಾ ಮಕ್ಕಳು ಸಲ್ಲಿಸಿದ ಪೊಲೀಸ್ ವರದಿಗಳನ್ನು ಆಧರಿಸಿರಬೇಕು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ
ಇದನ್ನೂ ಓದಿ | ದುರ್ಗಾಪುರದ ಯುವಕರಿಗೆ ನಿತ್ಯವೂ ಬೇಕು ರಾಶಿ ರಾಶಿ ಕಾಂಡೊಮ್; ಇವರಿಗೆ ನಶೆಯ ಚಟ !