ಢಾಕಾ: ಬಾಂಗ್ಲಾದೇಶದಲ್ಲಿ ವಿವಾದಿತ ಮೀಸಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆ (Bangladesh Protest) ನಡೆದ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಶೇಖ್ ಹಸೀನಾ (Sheikh Hasina) ಅವರು ಭಾರತಕ್ಕೆ ಬಂದಿದ್ದಾರೆ. ಬಾಂಗ್ಲಾದೇಶದಲ್ಲಿ ಈಗ ಸೇನೆಯ ಆಡಳಿತ ಜಾರಿಗೆ ಬಂದಿದೆ. ದಂಗೆ ಹಿನ್ನೆಲೆಯಲ್ಲಿ ಭಾರತದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದರ ಬೆನ್ನಲ್ಲೇ, ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ (Taslima Nasrin) ಅವರು ಇಸ್ಲಾಮಿಸ್ಟ್‌ಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶವನ್ನು ತೊರೆಯಬೇಕಾಗಿದೆ. ಈಗಿನ ಅವರ ಪರಿಸ್ಥಿತಿಗೆ ಅವರೇ ಕಾರಣರಾಗಿದ್ದಾರೆ. ಇಸ್ಲಾಮಿಸ್ಟ್‌ಗಳು ಬೆಳೆಯಲು ಅವರು ಬಿಟ್ಟರು. ಭ್ರಷ್ಟಾಚಾರದಲ್ಲಿ ಅವರು ಭಾಗಿಯಾಗಲು ಅವಕಾಶ ಮಾಡಿಕೊಟ್ಟರು. ಆದರೀಗ, ಬಾಂಗ್ಲಾದೇಶವು ಮತ್ತೊಂದು ಪಾಕಿಸ್ತಾನದ ರೀತಿ ಆಗಬಾರದು. ಸೇನೆಯ ಆಡಳಿತ ಜಾರಿಗೆ ಬರಬಾರದು. ರಾಜಕೀಯ ಪಕ್ಷಗಳು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿ, ಜಾತ್ಯತೀತತೆಯನ್ನು ಅಳವಡಿಸಿಕೊಳ್ಳಬೇಕು” ಎಂದು ಲೇಖಕಿ ಪೋಸ್ಟ್ ಮಾಡಿದ್ದಾರೆ.
Hasina had to resign and leave the country. She was responsible for her situation. She made Islamists to grow. She allowed her people to involve in corruption. Now Bangladesh must not become like Pakistan. Army must not rule.Political parties should bring democracy & secularism.
— taslima nasreen (@taslimanasreen) August 5, 2024
ರೈಲು, ವಿಮಾನ ಸಂಚಾರ ರದ್ದು
ಬಾಂಗ್ಲಾದೇಶದಲ್ಲಿ ಭಾರಿ ಅರಾಜಕತೆ ಸೃಷ್ಟಿಯಾಗಿ, ಗಲಭೆಗಳು ಆರಂಭವಾದ ಹಿನ್ನೆಲೆಯಲ್ಲಿ ಕೋಲ್ಕೊತಾದಿಂದ ಢಾಕಾಗೆ ತೆರಳುವ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹೇಗೆಯೇ, ಬಾಂಗ್ಲಾದೇಶಕ್ಕೆ ತೆರಳುವ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಭಾರತೀಯರು ಮುಂದಿನ ಸೂಚನೆ ಮೇರೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬಾರದು. ಬಾಂಗ್ಲಾದೇಶದಲ್ಲಿರುವ ಭಾರತೀಯರು, ವಿದ್ಯಾರ್ಥಿಗಳು ತುಂಬ ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರ ಸೂಚಿಸಿದೆ.
ವಿವರಣೆ ಪಡೆದ ಮೋದಿ
ಭಾರತಕ್ಕೆ ಆಗಮಿಸಿರುವ ಶೇಖ್ ಹಸೀನಾ ಅವರನ್ನು ಘಾಜಿಯಾಬಾದ್‌ನ ಹಿಂಡನ್ ಏರ್ ಬೇಸ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯಾಗಿದ್ದು, ಅವರ ಜತೆ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಶೇಖ್ ಹಸೀನಾ ಅವರು ಲಂಡನ್‌ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶೇಖ್ ಹಸೀನಾ ಭಾರತಕ್ಕೆ ಬಂದಿರುವುದು, ಬಾಂಗ್ಲಾದೇಶದ ಹಿಂಸಾಚಾರ, ಗಡಿ ಬಿಕ್ಕಟ್ಟು ಸೇರಿ ಹಲವು ವಿಷಯಗಳನ್ನು ಮೋದಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೂ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಹಿಂದೂಗಳು ಅಸುರಕ್ಷಿತ: ಕಳವಳ ವ್ಯಕ್ತಪಡಿಸಿದ ತಸ್ಲೀಮಾ ನಸ್ರೀನ್