Site icon Vistara News

Sheikh Hasina: ತಂದೆ, ತಾಯಿ, ಮೂವರು ಸಹೋದರರ ಬರ್ಬರ ಹತ್ಯೆ; ಕಠಿಣ ಹಾದಿಯಲ್ಲಿ ಸಾಗಿ ಪ್ರಧಾನಿಯಾಗಿದ್ದ ಶೇಖ್‌ ಹಸೀನಾ

Sheikh Hasina

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ (violent protests) ಪರಿಣಾಮ ಪ್ರಧಾನಿ (Bangladesh PM) ಶೇಖ್ ಹಸೀನಾ (Sheikh Hasina ) ಸೋಮವಾರ ರಾಜೀನಾಮೆ ನೀಡಿ ರಾಜಧಾನಿ ಢಾಕಾ (Dhaka) ತೊರೆದು ಭಾರತದಲ್ಲಿ ಆಸರೆ ಪಡೆಯುತ್ತಿದ್ದಾರೆ. 76 ವರ್ಷದ ಹಸೀನಾ 1996ರ ಜೂನ್‌ನಿಂದ 2001ರ ಜುಲೈವರೆಗೆ ಮತ್ತು 2009ರ ಜನವರಿಯಿಂದ 2024ರ ಆಗಸ್ಟ್ ವರೆಗೆ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಾಂಗ್ಲಾದಲ್ಲಿ ಸುದೀರ್ಘ ಕಾಲ ಪ್ರಧಾನಿಯಾಗಿ ಅಧಿಕಾರ ಚಲಾಯಿಸಿದ ಖ್ಯಾತಿ ಇವರಿಗಿದೆ.

ಬಾಂಗ್ಲಾದೇಶದ ಸಂಸ್ಥಾಪಕ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಪುತ್ರಿ ಹಸೀನಾ ಅವರು ದೇಶದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದಾರೆ. ಒಟ್ಟಿಗೆ ಮೂರು ದಶಕಗಳವರೆಗೆ ಆಡಳಿತ ನಡೆಸಿರುವ ಅವರು, 1960ರ ದಶಕದದಲ್ಲಿ ಢಾಕಾ ವಿಶ್ವವಿದ್ಯಾನಿಲಯದ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.

ತಂದೆಯ ರಾಜಕೀಯ ಸಂಪರ್ಕಾಧಿಕಾರಿ:

ಪಾಕಿಸ್ತಾನ ಸರ್ಕಾರವು ಇವರ ತಂದೆಯನ್ನು ಬಂಧಿಸಿದಾಗ ಇವರು ತಂದೆಯ ರಾಜಕೀಯ ಸಂಪರ್ಕಾಧಿಕಾರಿಯಾಗಿದ್ದರು. 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದ ವಿಮೋಚನಾ ಯುದ್ಧದ ಸಮಯದಲ್ಲಿ ದಂಗೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಹಸೀನಾ ಮತ್ತು ಅವರ ಕುಟುಂಬ ಸದಸ್ಯರನ್ನು ಬಂಧಿಸಲಾಗಿತ್ತು.

ಬಾಂಗ್ಲಾ ಸ್ವಾತಂತ್ರ್ಯ ಪಡೆದ ಬಳಿಕ ಶೇಖ್‌ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಬಾಂಗ್ಲಾ ದೇಶದ ಮೊದಲ ಅಧ್ಯಕ್ಷರಾದರು. 1975ರ ಆಗಸ್ಟ್ ನಲ್ಲಿ ಆಗ ಅಧ್ಯಕ್ಷರಾಗಿದ್ದ ಶೇಖ್ ಮುಜಿಬುರ್ ರೆಹಮಾನ್ ಮತ್ತು ಅವರ ಪತ್ನಿ, ಮೂವರು ಪುತ್ರರನ್ನು ಅವರ ಮನೆಯಲ್ಲಿ ಬಂಡುಕೋರ ಮಿಲಿಟರಿ ಅಧಿಕಾರಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ದಾಳಿಯ ಸಮಯದಲ್ಲಿ ಶೇಖ್‌ ಹಸೀನಾ ವಿದೇಶದಲ್ಲಿದ್ದರು. ಅನಂತರ ಆರು ವರ್ಷಗಳ ಕಾಲ ಅವರು ದೇಶಭ್ರಷ್ಟರಾಗಿದ್ದರು. ಆಗಲೂ ಅವರಿಗೆ ಆಸರೆ ನೀಡಿದ್ದು ಭಾರತ.

ಅವಾಮಿ ಲೀಗ್ ನಾಯಕಿ

ಬಳಿಕ ಅವರ ತಂದೆ ಸ್ಥಾಪಿಸಿದ್ದ ರಾಜಕೀಯ ಪಕ್ಷವಾದ ಅವಾಮಿ ಲೀಗ್ ಅನ್ನು ಮುನ್ನಡೆಸಲು ಹಸೀನಾ ಅವರನ್ನು ಆಯ್ಕೆ ಮಾಡಲಾಯಿತು. ಇದು ಬಾಂಗ್ಲಾದೇಶದ ಅತಿದೊಡ್ಡ ರಾಜಕೀಯ ಸಂಘಟನೆಯಾಗಿದೆ. 1981ರಲ್ಲಿ ಬಾಂಗ್ಲಾದೇಶಕ್ಕೆ ಮರಳಿದ ಹಸೀನಾ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಲಿಷ್ಠ ನಾಯಕಿಯಾಗಿ ಹೊರಹೊಮ್ಮಿದರು. ಗೃಹಬಂಧನ ಸೇರಿ ಅನೇಕ ಸವಾಲುಗಳನ್ನು ಎದುರಿಸಿದ ಅವರು ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕಿಯಾದರು ಮತ್ತು ಮಿಲಿಟರಿ ಆಡಳಿತದ ಹಿಂಸಾಚಾರವನ್ನು ಧೈರ್ಯದಿಂದ ಎದುರಿಸಿದರು.


1990ರ ಡಿಸೆಂಬರ್ ನಲ್ಲಿ ಹಸೀನಾ ಅವರು ವ್ಯಾಪಕವಾದ ಸಾರ್ವಜನಿಕ ಬೆಂಬಲವನ್ನು ಪಡೆದುದರಿಂದ ಬಾಂಗ್ಲಾದೇಶದ ಕೊನೆಯ ಮಿಲಿಟರಿ ನಾಯಕರಾದ ಲೆಫ್ಟಿನೆಂಟ್ ಜನರಲ್ ಹುಸೇನ್ ಮೊಹಮ್ಮದ್ ಇರ್ಷಾದ್ ರಾಜೀನಾಮೆ ನೀಡಬೇಕಾಯಿತು. ವಿರೋಧ ಪಕ್ಷದ ನಾಯಕಿಯಾಗಿ ಹಸೀನಾ ಅವರು ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ (BNP) ಚುನಾವಣಾ ವಂಚನೆಯ ಬಗ್ಗೆ ಧ್ವನಿ ಎತ್ತಿದರು. ಸಂಸತ್ತನ್ನು ಬಹಿಷ್ಕರಿಸಲು ನಿರ್ಧರಿಸಿದರು. ಇದು ದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ನಾಂದಿ ಹಾಡಿತು.

ಪ್ರಧಾನಿಯಾಗಿ ಆಯ್ಕೆ

ಅಂತಿಮವಾಗಿ ಖಲೀದಾ ಜಿಯಾ ರಾಜೀನಾಮೆ ನೀಡಿದರು. 1996ರ ಜೂನ್‌ನಲ್ಲಿ ನಡೆದ ಚುನಾವಣೆಯ ಅನಂತರ ಹಸೀನಾ ಪ್ರಧಾನಿಯಾದರು. ಅವರ ಮೊದಲ ಅವಧಿಯಲ್ಲಿ ದೇಶವು ಆರ್ಥಿಕ ಬೆಳವಣಿಗೆ ಮತ್ತು ಬಡತನದಲ್ಲಿ ಇಳಿಕೆ ಕಂಡಿತು. ಆದರೆ ರಾಜಕೀಯ ಅಸ್ಥಿರತೆ ಮುಂದುವರಿಯಿತು. 2001ರ ಜುಲೈನಲ್ಲಿ ಹಸೀನಾ ಅವರ ಅಧಿಕಾರವಧಿಯು ಕೊನೆಗೊಂಡಿತು. ಬಾಂಗ್ಲಾದೇಶದ ಪ್ರಧಾನಿಯೊಬ್ಬರು ದೇಶದ ಸ್ವಾತಂತ್ರ್ಯದ ಅನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದು ಇದೇ ಮೊದಲು.

2006-2008ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸುಲಿಗೆ ಆರೋಪದ ಮೇಲೆ ಶೇಖ್‌ ಹಸೀನಾ ಅವರನ್ನು ಬಂಧಿಸಲಾಯಿತು. ಆದರೆ ಅವರ ಬಿಡುಗಡೆಯ ಅನಂತರ 2008ರ ಚುನಾವಣೆಯಲ್ಲಿ ಗೆದ್ದರು. ಪ್ರಮುಖ ಪಕ್ಷಗಳು ಬಹಿಷ್ಕರಿಸಿದ ಮತ್ತು ಅಂತಾರಾಷ್ಟ್ರೀಯ ವೀಕ್ಷಕರಿಂದ ಟೀಕೆಗೊಳಗಾದ ವಿವಾದಾತ್ಮಕ ಚುನಾವಣೆಯಲ್ಲಿ ಅವರು ಮತ್ತೆ 2014ರಲ್ಲಿ ಮೂರನೇ ಅವಧಿಗೆ ಮರು ಆಯ್ಕೆಯಾದರು.

2017ರಲ್ಲಿ ಮ್ಯಾನ್ಮಾರ್‌ನಲ್ಲಿ ಹಿಂಸಾಚಾರದಿಂದ ಪಲಾಯನ ಮಾಡುತ್ತಿರುವ ಸುಮಾರು ಒಂದು ಮಿಲಿಯನ್ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ಮತ್ತು ಸಹಾಯ ನೀಡಿದ್ದಕ್ಕಾಗಿ ಹಸೀನಾ ಪ್ರಶಂಸೆಯನ್ನು ಪಡೆದರು.

ಇದನ್ನೂ ಓದಿ: Bangladesh Protest: ರಫೇಲ್ ಯುದ್ಧ ವಿಮಾನಗಳ ಹಾರಾಟ, ರಾಡಾರ್‌ ಮೂಲಕ ಮೇಲ್ವಿಚಾರಣೆ; ಶೇಖ್‌ ಹಸೀನಾ ಸುರಕ್ಷತೆಗೆ ಭಾರತ ಕೈಗೊಂಡ ಕ್ರಮಗಳಿವು


ಮೀಸಲು ವಿರೋಧಿ ಚಳವಳಿಯ ಬಿಸಿ

2018ರ ನಾಲ್ಕನೇ ಅವಧಿಯ ಚುನಾವಣೆಯಲ್ಲೂ ಜಯ ಸಾಧಿಸಿದ ಹಸೀನಾ ಅವರಿಗೆ ಸಾಕಷ್ಟು ಸವಾಲುಗಳು ಮತ್ತೆ ಎದುರಾಯಿತು. ಸರ್ಕಾರಿ ಉದ್ಯೋಗ ಕೋಟಾ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಪ್ರಾರಂಭಿಸಿದ ಬಳಿಕ ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಅಶಾಂತಿ ಪ್ರಾರಂಭವಾಯಿತು. ಇದನ್ನು ನಿಯಂತ್ರಿಸುವುದು ಶೇಖ್ ಹಸೀನಾ ಮತ್ತು ಅವರ ಆಡಳಿತಾರೂಢ ಅವಾಮಿ ಲೀಗ್ ಪಕ್ಷಕ್ಕೆ ಸವಾಲಾಗಿ ಪರಿಣಮಿಸಿತು. ತಿಂಗಳುಗಳ ಕಾಲ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರತಿಪಕ್ಷಗಳ ಬೆಂಬಲದೊಂದಿಗೆ ಬಾಂಗ್ಲಾದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯಿತು. ನೂರಾರು ಜನರು ದಂಗೆಯಲ್ಲಿ ಸಾವಿಗೀಡಾದರು. ಬಾಂಗ್ಲಾ ವಿಮೋಚನೆ ಹೋರಾಟಗಾರರ ಕುಟುಂಬಗಳಿಗೆ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿ ನೀಡಬಾರದು ಎನ್ನುವುದು ಹೋರಾಟಗಾರರ ಆಗ್ರಹವಾಗಿತ್ತು. ಇದಕ್ಕೆ ಬೇರೆ ಬೇರೆ ಆಯಾಮಗಳು ಸೇರಿಕೊಂಡವು. ಕೊನೆಗೂ ಸುಪ್ರೀಂ ಕೋರ್ಟ್‌ ಮೀಸಲನ್ನು ಶೇ.5ಕ್ಕೆ ಸೀಮಿತಗೊಳಿಸಿತು. ಆದರೂ ಪ್ರತಿಭಟನೆ ನಿಲ್ಲಲಿಲ್ಲ. ಇದಕ್ಕೆ ಕಾರಣ ಏನೆಂದರೆ, ಈ ಪ್ರತಿಭಟನೆಗೆ ಪಾಕಿಸ್ತಾನ ಮತ್ತು ಚೀನಾದ ಕುಮ್ಮಕ್ಕಿತ್ತು. ಶೇಖ್‌ ಹಸೀನಾ ಯಾವತ್ತೂ ಭಾರತ ಪರ ನಿಲುವು ಹೊಂದಿರುವವರು. ಹಾಗಾಗಿ ಸಹಜವಾಗಿಯೇ ಅವರ ವಿರುದ್ಧ ಚೀನಾ ಮತ್ತು ಪಾಕಿಸ್ತಾನ ಮಸಲತ್ತು ನಡೆಸಿವೆ. ಶೇಖ್‌ ಹಸೀನಾ ಈಗ ಅಧಿಕಾರ ಕಳೆದುಕೊಂಡು, ತಾಯ್ನಾಡನ್ನೇ ತೊರೆದು ಅತಂತ್ರರಾಗಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

Exit mobile version