Site icon Vistara News

ಶೇಖ್‌ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿರುವುದು ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರುತ್ತಾ? ಬಾಂಗ್ಲಾದೇಶ ಹೇಳಿದ್ದೇನು?

Sheikh Hasina

ಢಾಕಾ: ಭಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಪ್ರತಿಭಟನಾಕಾರರ ರೊಚ್ಚಿಗೆ ಮಣಿದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಶೇಖ್‌ ಹಸೀನಾ (Sheikh Hasina)  ಅಲ್ಲಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನಸ್‌ (Muhammad Yunus) ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ಈ ಮಧ್ಯೆ ಅಲ್ಲಿನ ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್ ತೌಹಿದ್ ಹುಸೇನ್ (Md Touhid Hossain) ಮಹತ್ವದ ಹೇಳಿಕೆ ನೀಡಿ, ʼʼಶೇಖ್‌ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿರುವುದು ಭಾರತ-ಬಾಂಗ್ಲಾದೇಶಗಳ ನಡುವಿನ ಸಂಬಂಧದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಮತ್ತು ಢಾಕಾ ಯಾವಾಗಲೂ ನವದೆಹಲಿಯೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಹಸೀನಾ ಅವರ ಭಾರತ ವಾಸ್ತವ್ಯ ಮುಂದುವರಿದರೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ʼʼಈ ಪ್ರಶ್ನೆ ಅಪ್ರಸ್ತುತ. ಯಾರಾದರೂ ಒಂದು ದೇಶದಲ್ಲಿ ವಾಸಿಸುತ್ತಿದ್ದರೆ ಅದು ಆ ದೇಶದೊಂದಿಗಿನ ಸಂಬಂಧಗಳ ಮೇಲೆ ಏಕೆ ಪರಿಣಾಮ ಬೀರಬೇಕು? ಈ ಆತಂಕಕ್ಕೆ ಯಾವುದೇ ಕಾರಣವಿಲ್ಲ. ದ್ವಿಪಕ್ಷೀಯ ಸಂಬಂಧಗಳು ಮುಖ್ಯʼʼ ಎಂದು ಅವರು ಒತ್ತಿ ಹೇಳಿದ್ದಾರೆ.

ʼʼಬಾಂಗ್ಲಾದೇಶ ಮತ್ತು ಭಾರತ ಪ್ರತ್ಯೇಕ ಹಿತಾಸಕ್ತಿಗಳನ್ನು ಹೊಂದಿದೆ. ಹೀಗಾಗಿ ಉಭಯ ದೇಶಗಳ ನಡುವಿನ ಸಂಬಂಧವು ಒಂದು ದೇಶದಲ್ಲಿನ ಒಬ್ಬ ವ್ಯಕ್ತಿಯ ಉಪಸ್ಥಿತಿಯಿಂದ ಪ್ರಭಾವಿತವಾಗಿಲ್ಲ. ನಾವು ಯಾವತ್ತೂ ಭಾರತದೊಂದಿಗೆ ಉತ್ತಮ ಸಂಬಂಧ ಕಾಪಾಡಲು ಯತ್ನಿಸುತ್ತೇವೆʼʼ ಎಂದು ಅವರು ವಿವರಿಸಿದ್ದಾರೆ.

ಇದಕ್ಕೂ ಮುನ್ನ ಅವರು ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಸೇರಿದಂತೆ ಢಾಕಾದಲ್ಲಿ ಬೀಡುಬಿಟ್ಟಿರುವ ರಾಜತಾಂತ್ರಿಕರಿಗೆ ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ವಿವರಿಸಿ ಎಲ್ಲರ ಬೆಂಬಲವನ್ನು ಕೋರಿದರು. “ಬಾಂಗ್ಲಾದೇಶವು ಹೊಸ ಭವಿಷ್ಯವನ್ನು ರೂಪಿಸಲು ಆರಂಭಿಸಿದೆ. ಈ ನಿರ್ಣಾಯಕ ಸಮಯದಲ್ಲಿ ಅಂತಾರಾಷ್ಟ್ರೀಯ ಸಮುದಾಯದಲ್ಲಿನ ನಮ್ಮ ಎಲ್ಲ ಸ್ನೇಹಿತರು ಮತ್ತು ಪಾಲುದಾರರು ಮಧ್ಯಂತರ ಸರ್ಕಾರ ಮತ್ತು ನಮ್ಮ ಜನರಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತಾರೆ ಎನ್ನುವ ವಿಶ್ವಾಸವಿದೆʼʼ ಎಂದು ಹುಸೇನ್ ರಾಜತಾಂತ್ರಿಕರಿಗೆ ತಿಳಿಸಿದ್ದರು.

ಬಾಂಗ್ಲಾದೇಶವು ಇತರ ದೇಶಗಳೊಂದಿಗೆ ಮಾಡಿದ ಎಲ್ಲ ಒಪ್ಪಂದಗಳನ್ನು ಮುಂದುವರಿಸಲು ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ. ಇದೇ ವೇಳೆ ಅವರು ಶೇಖ್‌ ಹಸೀನಾ ಅವರ ಅವಾಮಿ ಲೀಗ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿ, ಇದು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಗಳಲ್ಲಿ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ. ʼʼಅದಾಗ್ಯೂ ನಮ್ಮ ಧೈರ್ಯಶಾಲಿ ವಿದ್ಯಾರ್ಥಿಗಳ ನೇತೃತ್ವದ ಸಾಮೂಹಿಕ ದಂಗೆಯಿಂದ ಬಾಂಗ್ಲಾದೇಶವು ಕಳೆದ ವಾರ ಎರಡನೇ ವಿಮೋಚನೆ ಪಡೆದುಕೊಂಡಿದೆʼʼ ಎಂದು ಬಣ್ಣಿಸಿದ್ದಾರೆ.

ದೇಶಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಮತ್ತು ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಮಧ್ಯಂತರ ಸರ್ಕಾರ ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಹುಸೇನ್ ತಿಳಿಸಿದ್ದಾರೆ.

ಇದನ್ನೂ ಓದಿ: Muhammad Yunus: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮೊಹಮ್ಮದ್‌ ಯೂನಸ್‌ ಪದಗ್ರಹಣ!

Exit mobile version