Site icon Vistara News

Shinjo shot dead: ಆ ಮಾಜಿ ಯೋಧ ಯಮಗಾಮಿಗೆ ಕೊಲ್ಲುವಂಥ ಸಿಟ್ಟೇನಿತ್ತು ಅಬೆ ಮೇಲೆ?

ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡು ಹಾರಿಸಿ ಕೊಂದ (Shinjo shot dead) ಯಮಗಾಮಿ ಟೆಟ್ಸುಯಾ ಎಂಬ ೪೧ ವರ್ಷದ ಮಾಜಿ ಯೋಧನನ್ನು ಪೊಲೀಸರು ಘಟನೆ ನಡೆದ ಕೂಡಲೇ ಬಂಧಿಸಿದ್ದಾರೆ. ನಿಜವೆಂದರೆ, ಜಪಾನ್‌ನಲ್ಲಿ ಗನ್‌ ಸಂಸ್ಕೃತಿ ಇಲ್ಲ, ಕೊಲ್ಲುವ ಪ್ರವೃತ್ತಿಯೂ ಕಡಿಮೆ. ಅಂಥ ದೇಶದಲ್ಲಿ ದೇಶದ ಒಬ್ಬ ಮಾಜಿ ಪ್ರಧಾನಿಯನ್ನು ಸಾರ್ವಜನಿಕವಾಗಿ ಒಬ್ಬ ಮಾಜಿ ಯೋಧ ಯಾಕೆ ಕೊಂದ, ಅವನ ಉದ್ದೇಶವೇನಿತ್ತು ಎನ್ನುವ ಪ್ರಶ್ನೆ ತುಂಬ ತೀವ್ರವಾಗಿ ಕಾಡುತ್ತಿದೆ.

ಭಾನುವಾರ ನಡೆಯಲಿರುವ ಮೇಲ್ಮನೆ ಚುನಾವಣೆಗೆ ಸಂಬಂಧಿಸಿ ಪ್ರಚಾರ ಭಾಷಣ ಮಾಡುತ್ತಿದ್ದ ಶಿಂಜೋ ಅಬೆ ಅವರನ್ನು ಕೊಲೆ ಮಾಡಿದ ಯಮಗಾಮಿ ಟೆಟ್ಸುಯಾ ಅದಕ್ಕೆ ಬಳಸಿದ್ದು ಮನೆಯಲ್ಲೇ ತಯಾರಿಸಿದ ಸಣ್ಣ ಕೋವಿಯನ್ನು. ನಿಜವೆಂದರೆ, ಕೊಲೆ ಮಾಡಿದ ಬಳಿಕ ಆತ ಎಲ್ಲೂ ಹೋಗದೆ ಅಲ್ಲೇ ನಿಂತಿದ್ದ. ಪೊಲೀಸರು ಬಂದಾಗ ಸ್ವಲ್ಪ ದೂರ ಓಡಿ ಹೋದರೂ ತಪ್ಪಿಸಿಕೊಳ್ಳುವುದು ಅವನ ಉದ್ದೇಶದಂತೆ ಕಂಡಿರಲಿಲ್ಲ.

ಶಿಂಜೋ ಅಬೆ ಅವರು ಭಾಷಣ ಮಾಡುತ್ತಿದ್ದಾಗ ಯಮಗಾಮಿ ಅವರ ಹಿಂದೆ ಬರುವುದು, ಎರಡು ಬಾರಿ ಗುಂಡು ಹಾರಿಸುವುದು ವಿಡಿಯೊದಲ್ಲಿ ದಾಖಲಾಗಿದೆ. ಜತೆಗೆ ಅಬೆ ಅವರು ಕುಸಿದು ಬೀಳುವಾಗಲೂ ಆತ ಅಲ್ಲೇ ನಿಂತಿದ್ದಾನೆ. ೨೦೦೫ರ ಅವಧಿಯಲ್ಲಿ ಮೂರು ವರ್ಷಗಳ ಕಾಲ ಜಪಾನಿನ ನೌಕಾಪಡೆಯಲ್ಲಿ ಕೆಲಸ ಮಾಡಿದ್ದ ಈತ ಎರಡು ಗುಂಡುಗಳನ್ನು ಹಾರಿಸಿದ್ದ.

ಕೊಲೆಗಾರ ತಾನು ಬಳಸಿದ ಕೋವಿಯನ್ನು ಕೈಯಲ್ಲೇ ಹಿಡಿದುಕೊಂಡಿದ್ದ. ಆತನನ್ನು ಓಡಿಸಿ ಹಿಡಿಯುವ ವೇಳೆ ಅದು ನೆಲಕ್ಕೆ ಬಿದ್ದಿತ್ತು. ಅದು ಒಂದು ಸಣ್ಣಗಾತ್ರದ ಕೋವಿ ಎಂದು ಪೊಲೀಸರು ತಿಳಿಸಿದ್ದಾರೆ.

ಯಾಕೆ ಕೊಂದ ಎಂದರೆ…
ʻʻನನಗೆ ಶಿಂಜೊ ಅಬೆ ಬಗ್ಗೆ ತೃಪ್ತಿ ಇಲ್ಲ. ಹೀಗಾಗಿ ಕೊಲ್ಲಬೇಕು ಅನಿಸಿತು, ಕೊಂದೆʼʼ ಎಂದು ಕೊಲೆಯ ಕಾರಣವನ್ನು ಕೇಳಿದಾಗ ಯಮಗಾಮಿ ಕೊಟ್ಟ ಉತ್ತರ. ಆದರೆ, ಅತೃಪ್ತಿಯ ಹಿಂದಿನ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ. ಅಬೆ ಅವರು ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿ ಇರಲಿಲ್ಲ. ಈ ಮಾಜಿ ಯೋಧನಿಗೆ ನೋವು ತರುವ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಂಡಿರುವ ಸಾಧ್ಯತೆಗಳಿಲ್ಲ. ಜಪಾನ್‌ನಲ್ಲಿ ಅಬೆ ಅವರ ಬಗ್ಗೆ ಕೊಲ್ಲುವಂಥ ಆಕ್ರೋಶ ತರುವ ಘಟನೆಗಳು ನಡೆದಿಲ್ಲ. ಅಬೆ ಅವರು ಕಟ್ಟಾ ಬಲಪಂಥೀಯರಾದರೂ ಭಾರತದಲ್ಲಿರುವಂತೆ ಕೊಲ್ಲುವಷ್ಟು ದ್ವೇಷ ರಾಜಕಾರಣ ಇಲ್ಲ. ಹೀಗಾಗಿ, ಅತೃಪ್ತಿಯನ್ನೇ ಮುಂದಿಟ್ಟುಕೊಂಡು ಕೊಲೆ ಮಾಡುವ ಕ್ಷುಲ್ಲಕತೆಯನ್ನು ಆರೋಪಿ ಮೆರೆದಿದ್ದಾನೆ ಎಂದು ಸದ್ಯಕ್ಕೆ ಹೇಳಬಹುದು.

ಹತಾಶ ಮನೋಭಾವವೇ ಕಾರಣ?

ಈ ನಡುವೆ, ಜಪಾನಿನಲ್ಲಿ ಹತಾಶ ಮನೋಭಾವ, ವಿಕ್ಷಿಪ್ತತೆಗಳು ಹೆಚ್ಚುತ್ತಿರುವುದನ್ನು ಗುರುತಿಸಲಾಗಿದೆ. ಅತಿಯಾದ ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಏಕಾಂಗಿತನಗಳು ಸೇರಿ ಮನುಷ್ಯರು ಮಾನಸಿಕ ಸಮಸ್ಯೆಗೆ ಸಿಲುಕುತ್ತಿರುವುದು ಹೆಚ್ಚಾಗಿದೆ. ಈ ಪ್ರಕರಣವೂ ಒಬ್ಬ ಅಂಥ ವಿಕ್ಷಿಪ್ತನ ಕೃತ್ಯ ಇದ್ದರೂ ಬಹುದು ಎಂಬ ಮಾತು ಕೇಳಿಬರುತ್ತಿದೆ.

ಜಪಾನ್‌ನಲ್ಲಿ ರಾಜಕಾರಣಿಗಳು ಸೇರಿ ಯಾರಿಗೂ ವಿಶೇಷ ರಕ್ಷಣೆ ಇಲ್ಲ. ನಾರಾದಲ್ಲಿ ಚುನಾವಣೆ ಪ್ರಚಾರ ನಡೆದಿದ್ದು ಕೂಡಾ ಬೀದಿಯಲ್ಲೆ. ಹೀಗಾಗಿ ಕೊಲ್ಲಬೇಕು ಎಂದು ನಿರ್ಧಾರ ಮಾಡಿದರೆ ಕೊಲ್ಲುವುದಕ್ಕೆ ಸುಲಭ ದಾರಿಗಳನ್ನು ಕಂಡುಕೊಳ್ಳಬಹುದು. ಇದು ಕೂಡಾ ಕೊಲೆಯ ಹಿಂದೆ ಕೆಲಸ ಮಾಡಿರಬಹುದು ಎಂಬ ಊಹೆ ಇದೆ.

ಇದನ್ನೂ ಓದಿ| ಭಾಷಣ ಮಾಡುತ್ತಿದ್ದಾಗ ಗುಂಡೇಟು; ಜಪಾನ್‌ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ನಿಧನ

Exit mobile version