ನೆದರ್ಲೆಂಡ್: ಜರ್ಮನಿಯಿಂದ ಈಜಿಪ್ಟ್‌ಗೆ ಕಾರುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಸರಕು ಹಡಗಿಗೆ ನೆದರ್ಲೆಂಡ್ ಕರಾವಳಿಯಲ್ಲಿ ಬೆಂಕಿ (Ship Fire Incident) ಹತ್ತಿಕೊಂಡಿದೆ. ಇದರಿಂದಾಗಿ ಹಡಗಿನಲ್ಲಿದ್ದ ಭಾರತ ಮೂಲದ ಸಿಬ್ಬಂದಿಯೊಬ್ಬ ಸಾವನ್ನಪ್ಪಿದ್ದಾನೆ. ಉಳಿದ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.
ಹಡಗಿನಲ್ಲಿ ಒಟ್ಟಾರೆಯಾಗಿ ಮೂರು ಸಾವಿರ ಕಾರುಗಳನ್ನು ಹೊತ್ತೊಯ್ಯಲಾಗುತ್ತಿತ್ತು. ಅದರಲ್ಲಿ 25 ಎಲೆಕ್ಟ್ರಿಕ್ ಕಾರುಗಳೂ ಇದ್ದು, ಅದರಲ್ಲಿ ಒಂದರಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಘಟನೆಯ ಬಗ್ಗೆ ನೆದರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಾಹಿತಿ ನೀಡಿದೆ. “ಸರಕು ಹಡಗಿನಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಗ್ಗೆ ದುಃಖಿತರಾಗಿದ್ದೇವೆ. ಒಬ್ಬ ಭಾರತ ಮೂಲದ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ಇನ್ನೂ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ನಾವು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಮೃತರ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಸಹಾಯ ಮಾಡುತ್ತೇವೆ” ಎಂದು ರಾಯಭಾರ ಕಚೇರಿ ತಿಳಿಸಿದೆ.
ಇದನ್ನೂ ಓದಿ: Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್ ಮಾಡುತ್ತದೆ ಈ ಬೆಕ್ಕು!
ಹಡಗಿನಲ್ಲಿ ಒಟ್ಟು 23 ಸಿಬ್ಬಂದಿಯಿದ್ದು ಅದರಲ್ಲಿ ಏಳು ಸಿಬ್ಬಂದಿ ಬೆಂಕಿ ಕಂಡ ತಕ್ಷಣ ಭಯದಿಂದ ಸಮುದ್ರಕ್ಕೆ ಹಾರಿದ್ದಾರೆ. ಅವರನ್ನು ಹತ್ತಿರದಲ್ಲಿದ್ದ ಹಡಗುಗಳು ರಕ್ಷಿಸಿವೆ. ಬಾಕಿಯುಳಿದ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮುಖಾಂತರ ರಕ್ಷಣೆ ಮಾಡಲಾಗಿದೆ.
ಸದ್ಯ ಹಡಗಿನ ಬೆಂಕಿಯನ್ನು ನಂಗಿಸಲು ಎಲ್ಲ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೆಲಿಕಾಪ್ಟರ್‌ನಿಂದ ನೀರನ್ನು ಹಾಯಿಸಲಾಗುತ್ತಿದೆ. ಆದರೆ ಹಡಗಿಗೆ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಇಳಿಸುವುದು ಅಪಾಯವಾಗಿರುವುದರಿಂದ ಅಂತಹ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ನಂಗಿಸಲು ದಿನಗಳು ಅಥವಾ ವಾರಗಳೇ ಬೇಕಾಗಬಹುದು ಎಂದು ಹೇಳಲಾಗಿದೆ.
ಹಡಗು ಡಚ್ ದ್ವೀಪದ ಉತ್ತರಕ್ಕೆ 27 ಕಿ.ಮೀ. ದೂರದಲ್ಲಿ ಮುಳುಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಅಮಲ್ಯಾಂಡ್‌ಗೆ ಸಮೀಪದಲ್ಲೇ ಮುಳುಗಲಿದೆ. ಇದು ವಿಶ್ವಾದ್ಯಂತದ ವಲಸೆ ಹಕ್ಕಿಗಳಿಗೆ ಪ್ರಮುಖವಾದ ಪ್ರದೇಶವಾಗಿದೆ.