ಚಿಕಾಗೋ: ಯುಎಸ್‌ನಲ್ಲಿ ಜುಲೈ 4ರಂದು ಸ್ವಾತಂತ್ರ್ಯೋತ್ಸವ ಆಚರಣೆ ಇತ್ತು. ರಾಷ್ಟ್ರದ ಅನೇಕ ಕಡೆ ಪರೇಡ್‌ಗಳು ನಡೆದಿವೆ. ಆದರೆ ಚಿಕಾಗೋ ಉಪವಲಯದಲ್ಲಿ ನಡೆದ ಪರೇಡ್‌ನಲ್ಲಿ ರಕ್ತದೋಕುಳಿಯೇ ನಡೆದುಹೋಗಿದೆ. 22ವರ್ಷದ ಯುವಕನೊಬ್ಬ ಮಾಡಿದ ಗುಂಡಿನ ದಾಳಿಗೆ ಆರು ಮಂದಿ ಮೃತಪಟ್ಟಿದ್ದಾರೆ. 36ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಗನ್‌ಮ್ಯಾನ್ ಚಿಲ್ಲರೆ ಅಂಗಡಿಯ ಮೇಲ್ಛಾವಣಿಯಲ್ಲಿ ನಿಂತು ಪರೇಡ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಶೂಟರ್ ರಾಬರ್ಟ್ ಇ ಕ್ರಿಮೊ III ಪೊಲೀಸರು ಬಂಧಿಸಿದ್ದಾರೆ. ಈತ ಗುಂಡು ಹಾರಿಸಿ ತಪ್ಪಿಸಿಕೊಂಡು ಹೋಗುತ್ತಿದ್ದ. ಪೊಲೀಸರೂ ಕೂಡ ಬೆನ್ನಟ್ಟಿದ್ದರು. ಕೆಲವೇ ಹೊತ್ತಲ್ಲಿ ಆತ ಸಿಕ್ಕಿಬಿದ್ದ. ಅವನು ತಪ್ಪಿಸಿಕೊಳ್ಳುವ ಯತ್ನವನ್ನೇನೂ ಮಾಡಲಿಲ್ಲ ಎಂದು ಹೈಲ್ಯಾಂಡ್ ಪಾರ್ಕ್ ಪೊಲೀಸ್ ಮುಖ್ಯಸ್ಥ ಲೌ ಜೋಗ್ಮೆನ್ ತಿಳಿಸಿದ್ದಾರೆ.
ಇಲಿನಾಯ್ಸ್ ಎಂಬಲ್ಲಿನ ಹೈಲ್ಯಾಂಡ್ ಪಾರ್ಕ್ ರಸ್ತೆಯಲ್ಲಿ ಪರೇಡ್ ನಡೆಯುತ್ತಿತ್ತು. ಅನೇಕರು ಭಾಗವಹಿಸಿದ್ದರು. ಈ ಪರೇಡ್ ನೋಡಲು ಅನೇಕರು ಅಲ್ಲೇ ಕಲ್ಲುಬೆಂಚ್‌ಗಳ ಮೇಲೆ ಕುಳಿತಿದ್ದರು. ಅಷ್ಟರಲ್ಲಿ ರಾಬರ್ಟ್ ಗುಂಡು ಹಾರಿಸಿದ್ದ. ಜನರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಗಾಬರಿಯಿಂದ ಎಡವಿ ಬಿದ್ದಿದ್ದಾರೆ. ಈ ದೃಶ್ಯಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಯುಎಸ್ ಅಧ್ಯಕ್ಷ ಜೋ ಬೈಡನ್, ʼಚಿಕಾಗೋದಲ್ಲಿ ನಡೆದ ಶೂಟೌಟ್‌ನಿಂದ ನನಗೆ ಮತ್ತು ನನ್ನ ಪತ್ನಿ ಜಿಲ್‌ಗೆ ತುಂಬ ಶಾಕ್ ಆಗಿದೆ. ಸ್ವಾತಂತ್ರ್ಯ ದಿನದಂದೇ ಅಮೆರಿಕ ಸಮುದಾಯಕ್ಕೆ ಮತ್ತೊಂದು ಗುಂಡಿನ ದಾಳಿಯ ದುಃಖ ಎದುರಾಗಿದೆ. ಬಂದೂಕು ಹಿಂಸಾಚಾರವೂ ಸಾಂಕ್ರಾಮಿಕದಂತಾಗಿದ್ದು, ಅದರ ನಿರ್ಮೂಲನಕ್ಕಾಗಿ ನಾವೂ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟೆಕ್ಸಾಸ್ ಶೂಟೌಟ್; ಮಕ್ಕಳು ಬೇಡಿ ಕೊಳ್ಳುತ್ತಿದ್ದರೂ 45 ನಿಮಿಷ ಹೊರಗೇ ನಿಂತಿದ್ದರು ಪೊಲೀಸ್