ಮಾಸ್ಕೋ: ಸೆಂಟ್ರಲ್ ರಷ್ಯಾದ ಇಜೇವ್ಸ್ಕ್ ನಗರದ ಶಾಲೆಯಲ್ಲಿ ವ್ಯಕ್ತಿಯೊಬ್ಬ ಯದ್ವಾತದ್ವಾ ಗುಂಡು ಹಾರಿಸಿ (Russia School Shooting) ಐವರು ಮಕ್ಕಳು ಸೇರಿದಂತೆ 13 ಜನರನ್ನು ಕೊಂದಿದ್ದಾರೆ. ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಮೃತರ ಪೈಕಿ ಐವರು ಮಕ್ಕಳಿದ್ದರೆ, ಇಬ್ಬರು ಸೆಕ್ಯುರಿಟಿಗಳು, ಇಬ್ಬರು ಶಿಕ್ಷಕರೂ ಇದ್ದಾರೆ ಎಂದು ರಷ್ಯಾದ ಇನ್ವೆಸ್ಟಿಗೇಟಿವ್ ಕಮೀಟಿ ಹೇಳಿದೆ. ಈ ಘಟನೆಯಲ್ಲಿ ಒಟ್ಟಾರೆ 20 ಜನರು ಗಾಯಗೊಂಡಿದ್ದಾರೆ.
ಬಂದೂಕುಧಾರಿ ನಾಜಿ ಗುರುತಿರುವ ಕಪ್ಪಬಣ್ಣದ ಟಾಪ್ ಹಾಗೂ ಮುಸುಕು ಧರಿಸಿದ್ದ. ಆತನ ಬಳಿ ಯಾವುದೇ ಐಡಿ ಕಾರ್ಟ್ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಂದೂಕುಧಾರಿ ವ್ಯಕ್ತಿಯ ಪರಿಚಯವನ್ನು ಶೋಧಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮೃತರು ಹಾಗೂ ಗಾಯಗೊಂಡವರ ಪೈಕಿ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಪ್ರಾದೇಶಿಕ ಗವರ್ನರ್ ಅಲೆಕ್ಸಾಂಡರ್ ಬ್ರೆಚ್‌ಲೋವ್ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲಾಗಿದೆ. ಸ್ಕೂಲ್‌ನಲ್ಲಿ ನಡೆದ ಶೂಟೌಟ್‌ನಿಂದ ಜನರು ಭಯಭೀತರಾಗಿದ್ದಾರೆ. ಪೋಷಕರು ತೀವ್ರ ಆತಂಕಗೊಂಡಿದ್ದಾರೆ. ಮೃತ ಮಕ್ಕಳ ಪೋಷಕರು ದುಃಖದಲ್ಲಿ ಮುಳುಗಿದ್ದಾರೆ.
ಇಜೇವ್ಸ್ಕ್ 630,000 ಜನಸಂಖ್ಯೆಯನ್ನು ಹೊಂದಿದ್ದು, ರಷ್ಯಾದ ಉದ್ಮುರ್ತ್ ರಿಪಬ್ಲಿಕ್‌ನ ಪ್ರಾದೇಶಿಕ ರಾಜಧಾನಿಯಾಗಿದೆ ಮತ್ತು ಇದು ಮಾಸ್ಕೋದಿಂದ ಪೂರ್ವಕ್ಕೆ ಸಾವಿರ ಕಿ.ಮೀ. ದೂರದಲ್ಲಿದೆ.
ಇದನ್ನೂ ಓದಿ | ಬಂದೂಕು ಲಾಬಿ ವಿರುದ್ಧ ನಾವು ಒಂದಾಗಿ ನಿಂತು ಹೋರಾಡುವುದು ಎಂದು? ಶಾಲಾ ಮಕ್ಕಳ ಹತ್ಯೆಗೆ ಮರುಗಿದ ಜೊ ಬೈಡೆನ್