ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಏಳು ಶಿಕ್ಷಕರು ಹತ್ಯೆಗೀಡಾಗಿದ್ದಾರೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಕರಾಮ್ ಬುಡಕಟ್ಟು ಜಿಲ್ಲೆಯ ಅನಾಡೋಲು ಎಂಬಲ್ಲಿನ ಪರಚಿನಾರ್ ಪಟ್ಟಣದ ಸರ್ಕಾರಿ ಹೈಸ್ಕೂಲ್ವೊಂದರಲ್ಲಿ ಘಟನೆ ನಡೆದಿದೆ. ಈ ಗುಂಡಿನ ದಾಳಿ ನಡೆಯುವುದಕ್ಕೂ ಮೊದಲು ಇನ್ನೊಂದು ದಾಳಿ ನಡೆದಿತ್ತು. ಅದರಲ್ಲಿ ಒಬ್ಬ ಶಿಕ್ಷಕನ ಹತ್ಯೆಯಾಗಿತ್ತು. ಗುಂಡಿನ ದಾಳಿ ನಡೆದಾಗ ಮಕ್ಕಳು ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದರು. ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಉಗ್ರರ ಕೈವಾಡ ಇರಲೂ ಬಹುದು ಎಂದು ಪೊಲೀಸರು ಹೇಳಿದ್ದಾರೆ.
ಈ ಎರಡೂ ದಾಳಿಯಲ್ಲಿ ಕೊಲ್ಲಲ್ಪಟ್ಟ ಶಿಕ್ಷಕರೆಲ್ಲರೂ (8 ಮಂದಿ ಶಿಕ್ಷಕರು) ಶಿಯಾ ಸಮುದಾಯದವರೇ ಆಗಿದ್ದಾರೆ. ಪಾಕಿಸ್ತಾನದಲ್ಲಿ ಶಿಯಾ ಸಮುದಾಯದವರು ಅಲ್ಪಸಂಖ್ಯಾತರು. ದೇಶಾದ್ಯಂತ ಹಲವು ಕಡೆಗಳಲ್ಲಿ ಈ ಶಿಯಾ ಜನಾಂಗದವರು ಬಹುಸಂಖ್ಯಾತರಾದ ಸುನ್ನಿಗಳಿಂದ ದಾಳಿಗೆ ಒಳಗಾಗುತ್ತಲೇ ಇರುತ್ತಾರೆ. ಅದರಲ್ಲೂ ಸುನ್ನಿ ಉಗ್ರರು ಶಿಯಾ ಜನಾಂಗದವರನ್ನು ಹತ್ಯೆ ಮಾಡುತ್ತಲೇ ಇರತ್ತಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಕಟುಕ ಎಂದು ಬೈದಿದ್ದ ಪಾಕಿಸ್ತಾನ ಸಚಿವ ಭಾರತಕ್ಕೆ; ಗೋವಾ ತಲುಪಿದ ಬಿಲಾವಲ್ ಭುಟ್ಟೋ ಜರ್ದಾರಿ
ಇಡೀ ಪಾಕಿಸ್ತಾನದಲ್ಲಿ ಪರಚಿನಾರ್ ಪಟ್ಟಣದಲ್ಲಿ ಮಾತ್ರ ಶಿಯಾ ಸಮುದಾಯದವರು ಬಹುಸಂಖ್ಯಾತರು ಇದ್ದಾರೆ. ಇದೇ ಸಿಟ್ಟಿಗಾಗಿಯೇ ಉಗ್ರರು ಟಾರ್ಗೆಟ್ ಮಾಡುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಇಂಥ ಶಾಲೆಗಳಿಗೆ ಬಂದು ಶೂಟ್ ಮಾಡುವುದು ತೀರ ಅಪರೂಪ. ಸಾಮಾನ್ಯವಾಗಿ ಅಮೆರಿಕದಲ್ಲಿ ಹೀಗೆ ಶಾಲೆ-ಕಾಲೇಜುಗಳಲ್ಲಿ ಫೈರಿಂಗ್ ಘಟನೆಗಳು ನಡೆಯುತ್ತಿರುತ್ತವೆ. 2016ರಲ್ಲಿ ಪೇಶಾವರದಲ್ಲಿ ಸೇನಾ ಶಾಲೆಯೊಂದರ ಮೇಲೆ ಗುಂಡು ಮತ್ತು ಬಾಂಬ್ ದಾಳಿಯಾಗಿತ್ತು. ಅದರಲ್ಲಿ ವಿದ್ಯಾರ್ಥಿಗಳು ಬಹುಪಾಲು ಸೇರಿ 140 ಮಂದಿ ಮೃತಪಟ್ಟಿದ್ದರು.