ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು (America Shootout) ಮೊಳಗಿದೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆಯವರೆಗೆ ಒಟ್ಟು ಮೂರು ಸ್ಥಳಗಳಲ್ಲಿ ಶೂಟೌಟ್ ನಡೆದಿದ್ದು, ಒಟ್ಟು 9 ಜನರು ಮೃತಪಟ್ಟಿದ್ದಾರೆ. ಯುಎಸ್‌ನಲ್ಲಿ ಇತ್ತೀಚೆಗೆ ಪದೇಪದೆ ಗುಂಡಿನ ದಾಳಿಯಾಗುತ್ತಿದೆ. ಇತ್ತೀಚೆಗೆ ಟೆಕ್ಸಾಸ್‌ನ ಶಾಲೆಯೊಂದರಲ್ಲಿ ನಡೆದ ಶೂಟೌಟ್‌ನಲ್ಲಿ 19 ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕಿಯರು ಮೃತಪಟ್ಟಿದ್ದರು. ಅದಾದ ಮೇಲೆ ಓಕ್ಲಹಾಮಾದ ಆಸ್ಪತ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸರ್ಜನ್ ಸೇರಿ ಐವರ ಸಾವಾಗಿತ್ತು. ಅಷ್ಟಕ್ಕೇ ನಿಲ್ಲದೆ, ಮಿಲ್ವಾಕಿಯ ದಕ್ಷಿಣದಲ್ಲಿ ರೇಸಿನ್ ಪ್ರದೇಶದ ಸ್ಮಶಾನದಲ್ಲಿ ಮತ್ತು ಮಧ್ಯಪಶ್ಚಿಮ ಭಾಗದಲ್ಲಿರುವ ಅಯೋವಾದಲ್ಲಿನ ಕಾರ್ನರ್ ಸ್ಟೋನ್ ಚರ್ಚ್‌ನಲ್ಲಿ ಕೂಡ ಶೂಟೌಟ್ ಆಗಿತ್ತು.
ಈಗ ಹೊಸದಾಗಿ ಮೂರು ಕಡೆಗಳಲ್ಲಿ ಶೌಟೌಟ್ ಆಗಿದೆ. ಅದರಲ್ಲಿ ಫಿಲಡೆಲ್ಫಿಯಾದಲ್ಲಿ ಮೊದಲು ಇಬ್ಬರ ನಡುವೆ ಗಲಾಟೆ-ಜಗಳ ಶುರುವಾಗಿತ್ತು. ಅವರು ಕೆಲವೇ ಹೊತ್ತಲ್ಲಿ ಪರಸ್ಪರ ಗುಂಡು ಹಾರಿಸಿಕೊಳ್ಳಲು ಪ್ರಯತ್ನಿಸತೊಡಗಿದರು. ಈ ಹೊಡೆದಾಟದಲ್ಲಿ ಅಲ್ಲಿಯೇ ಇದ್ದ ಬಾರ್ & ರೆಸ್ಟೋರೆಂಟ್ ಮೇಲೆ ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಏಕಾಏಕಿ ನಡೆದ ಗುಂಡಿನ ದಾಳಿಯಿಂದ ಅಲ್ಲಿನ ಜನರೆಲ್ಲ ಸಿಕ್ಕಾಪಟೆ ಕಂಗಾಲಾಗಿದ್ದರು. ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಚಟ್ಟನೂಗಾ ಎಂಬಲ್ಲಿರುವ ಬಾರ್‌ನಲ್ಲಿ ಶನಿವಾರ ಮಧ್ಯರಾತ್ರಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಇದರಲ್ಲಿ 14 ಜನರು ಗಾಯಗೊಂಡಿದ್ದು, ಮೂವರು ಮೃತಪಟ್ಟಿದ್ದಾರೆ. ಭಾನುವಾರ ಮುಂಜಾನೆ ಇನ್ನೊಂದು ಶೂಟೌಟ್ ಆಗಿದೆ. ಇದಾಗಿದ್ದು ಮಿಚಿಗನ್‌ನ ಸಗಿನಾವ್ ಎಂಬಲ್ಲಿ. ಇಲ್ಲೂ ಕೂಡ ಮೂರು ಜನ ಪ್ರಾಣ ಕಳೆದುಕೊಂಡಿದ್ದಾರೆ ಇಬ್ಬರು ಗಾಯಗೊಂಡಿದ್ದಾರೆ. ಈ ಮೂರು ಶೂಟೌಟ್ ಪ್ರಕರಣದಲ್ಲಿ ಇದುವರೆಗೆ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ.
ಇದನ್ನೂ ಓದಿ: ಅಮೆರಿಕದಲ್ಲಿ ಸ್ಮಶಾನ-ಚರ್ಚ್‌ನಲ್ಲಿ ಗುಂಡಿನ ದಾಳಿ; ಇಬ್ಬರು ಸಾವು, ಇಬ್ಬರಿಗೆ ಗಾಯ